ಶಿವಮೊಗ್ಗ : ಯಡಿಯೂರಪ್ಪ ಅವರಿಗೆ ವಿಶೇಷ ಸ್ಥಾನಮಾನ ಕೊಟ್ಟಿರುವುದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಂತೋಷವಾಗಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದ ಮುರುಘಾ ಮಠ ಇಡೀ ರಾಜ್ಯಕ್ಕೆ ಪ್ರಖ್ಯಾತಿಯಾಗಿದೆ. ಆ ಸುದ್ದಿಗಳನ್ನು ಕೇಳಿ ಬೇಸರವಾಯ್ತು. ಇದು ಒಂದು ರೀತಿ ಅನಿಷ್ಟವಾದ ಸುದ್ದಿ. ಈ ಸುದ್ದಿ ಸುಳ್ಳಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡ್ತೇನೆ. ತನಿಖೆ ನಡೆಯುತ್ತಿದೆ. ನಿಖೆಯ ವರದಿ ಬಂದ ನಂತರ ಏನೂ ಬೇಕಾದ್ರೂ ಹೇಳಬಹುದು. ಈಗ ಏನು ಹೇಳಿದರೂ ತಪ್ಪಾಗುತ್ತದೆ. ತನಿಖೆಯನ್ನು ನಂಬಿಕೊಂಡಿರುವವರು ನಾವು. ತನಿಖೆಯಲ್ಲಿ ಏನು ರಿಪೋರ್ಟ್ ಬರುತ್ತದೋ ಅದನ್ನ ಒಪ್ಪಿಕೊಳ್ಳಬೇಕು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಟೀಲ್ ಮುಂದುವರಿಯುವ ವಿಚಾರವಾಗಿ ಮಾತನಾಡಿದ ಅವರು, ನನಗೂ ನಿನಗೂ ಇದರ ಬಗ್ಗೆ ಏಕೆ ಚಿಂತೆ. ನಮ್ಮ ರಾಷ್ಟ್ರೀಯ ನಾಯಕರು ಇದ್ದಾರೆ. ಈ ಬಗ್ಗೆ ಅವರು ತೀರ್ಮಾನ ಮಾಡ್ತಾರೆ. ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ದ. ಯಡಿಯೂರಪ್ಪ ಅವರಿಗೆ ವಿಶೇಷ ಸ್ಥಾನಮಾನ ಕೊಟ್ಟಿರುವುದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಂತೋಷವಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಿಸುತ್ತೇವೆ. ಕನಿಷ್ಠ 150 ಸ್ಥಾನ ಗಳಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅವರ ಆಸೆ ಖಂಡಿತಾ ಈಡೇರುತ್ತದೆ ಎಂದು ಹೇಳಿದರು.