ಗದಗ : 1997ರಲ್ಲಿ ಅಖಂಡ ಧಾರವಾಡ ಜಿಲ್ಲೆಯಿಂದ ಹೊರಹೊಮ್ಮಿದ ಗದಗ ಜಿಲ್ಲೆಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಆದ್ರೆ, ಆ ಸಂಭ್ರಮ ಕಳೆಗುಂದಿದೆ. 25 ವರ್ಷಗಳಾದ್ರೂ ಸರಿಯಾದ ರಸ್ತೆ, ಚರಂಡಿ, ಕುಡಿಯುವ ನೀರು, ವಾಹನ ಸೌಕರ್ಯ, ಕೈಗಾರಿಕೆ, ಕಾರ್ಖಾನೆ ಹೀಗೆ ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಜಿಲ್ಲೆಯಾಗಿ 25ನೇ ವರ್ಷಾಚರಣೆಗೆ ಸರ್ಕಾರ ಹಾಗೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಕನಿಷ್ಟ ಪಕ್ಷ ಜಿಲ್ಲೆಯ ಸ್ವಾತಂತ್ರ್ಯಹೋರಾಟಗಾರರು, ಶರಣರು, ಸಂತರು, ಸಾಹಿತಿಗಳು, ದಾರ್ಶನಿಕರ ಪುತ್ಥಳಿ ಸ್ವಚ್ಛಗೊಳಿಸಿ ಹೂಮಾಲೆ ಹಾಕಲಾಗದಷ್ಟು ಹೀನಾಯ ಸ್ಥಿತಿಗೆ ಸರ್ಕಾರ ಬಂತಾ ಅಂತ ಜನ ಕಿಡಿ ಕಾರುತ್ತಿದ್ದಾರೆ.
ಗದಗ ಜಿಲ್ಲೆ ಕವಿ ಕುಮಾರವ್ಯಾಸ, ಆದಿಕವಿ ಪಂಪರಂತಹ ದಿಗ್ಗಜರ ಕರ್ಮಭೂಮಿ. ಸಹಕಾರಿ ರಂಗಕ್ಕೆ ಏಷಿಯಾ ಖಂಡದಲ್ಲೇ ಈ ಜಿಲ್ಲೆ ಹೆಸರುವಾಸಿ.117 ಅಡಿ ಎತ್ತರದ ಬಸವೇಶ್ವರ ಪುತ್ಥಳಿ, ಐತಿಹಾಸಿಕ ಭೀಷ್ಮ ಕೆರೆ, ಬಿಂಕದಕಟ್ಟೆ ಮೃಗಾಲಯ, ವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನ, ಜುಮ್ಮಾ ಮಸೀದಿ, ರೆಮಿಂಗ್ ಟನ್ ಚರ್ಚ್, ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸಂಗೀತದ ಪುಣ್ಯಾಶ್ರಮ, ತೋಂಟದಾರ್ಯ ಮಠ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ಈ ಜಿಲ್ಲೆ ಪ್ರಸಿದ್ಧಿ ಪಡೆದಿದೆ. ಮುದ್ರಣ ಕ್ಷೇತ್ರದಲ್ಲಿ ಗದಗ ಜಿಲ್ಲೆ ಮಾದರಿ. ಜಿಲ್ಲೆ ಸಣ್ಣದಾದರೂ ಸಾಧನೆ ಬಹುದೊಡ್ಡದು. ಇಷ್ಟೆಲ್ಲಾ ಇದ್ರೂ ಅಭಿವೃದ್ಧಿ ಶೂನ್ಯವಾಗಿದೆ. ಧರ್ಮ ದಂಗಲ್, ಕೋಳಿ, ಮೊಟ್ಟೆ, ಮಾಂಸ, ಪರ್ಸೆಂಟೇಜ್ ಅಂತ ಜಿಲ್ಲೆ ಉತ್ಸವ ಮರೆತಿರುವುದು ನಾಚಿಕೆಗೇಡಿತನ ಅಂತಿದ್ದಾರೆ ಸಾರ್ವಜನಿಕರು.
ಒಟ್ನಲ್ಲಿ ಅದೇನೆ ಇರಲಿ ಸರ್ಕಾರ ಜಿಲ್ಲೆಗಳ ಬೆಳ್ಳಿ ಮಹೋತ್ಸವ ಮರೆತಿರುವುದು ನಿಜಕ್ಕೂ ವಿಪರ್ಯಾಸವೆ ಸರಿ.
ಮಹಲಿಂಗೇಶ್ ಹಿರೇಮಠ ಪವರ್ ಟಿವಿ ಗದಗ