ಮೈಸೂರು: ಮುರುಘಾ ಮಠದ ಶರಣರಾದ ಶಿವಮೂರ್ತಿ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪ ಮಾಡಿದ ಹಿನ್ನಲೆಯಲ್ಲಿ ಮಕ್ಕಳ ಪರ ಮೈಸೂರಿನಲ್ಲಿ ಪ್ರಕರಣವನ್ನ ದಾಖಲಿಸಿದ್ದ ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಪರಶುರಾಮ್ ಮಾತನಾಡಿದ್ದಾರೆ.
ಸ್ವಾಮೀಜಿಗಳಿಂದ ಲೈಂಗಿಕ ದೌರ್ಜನ್ಯ ಒಳಗಾದ ಮಕ್ಕಳನ್ನು ಚಿತ್ರದುರ್ಗಕ್ಕೆ ಕಳುಹಿಸುತ್ತೇವೆ. ಮಕ್ಕಳ ರಕ್ಷಣಾ ಸಮಿತಿಯ ನ್ಯಾಯಾಂಗ ಅಧಿಕಾರಿ, ಒಡನಾಡಿ ಪ್ರತಿನಿಧಿಯು ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಸಂತ್ರಸ್ತ ಬಾಲಕಿಯರಿಗೆ ಎಸ್ಕಾರ್ಟ್ ಭದ್ರತೆ ಒದಗಿಸಲಿದೆ ಎಂದು ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಪರಶುರಾಮ್ ಹೇಳಿದರು.
ಮಕ್ಕಳ ರಕ್ಷಣಾ ಸಮಿತಿಯ ಸಮಾಲೋಚಕರು ಮಕ್ಕಳ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಚಿತ್ರದುರ್ಗದ ಪೊಲೀಸ್ ಠಾಣೆಯಲ್ಲಿ ನಮಗೆ ನ್ಯಾಯ ಸಿಗಲ್ಲ. ನಾವು ಇಲ್ಲಿಯೇ ಇರುತ್ತೇವೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ವಿಚಾರಣೆ ಮುಗಿದ ಬಳಿಕ ವಾಪಸ್ ಕರೆತಂದು ಒಡನಾಡಿಯಲ್ಲೇ ಪುನರ್ ವಸತಿ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ಪ್ರಾಥಮಿಕ ತನಿಖೆ ವಿಳಂಬ ಆಗಿರಬಹುದು. ಆದರೆ ಏನೂ ಆಗಿಯೇ ಇಲ್ಲ ಎಂದುಕೊಳ್ಳಬೇಕಿಲ್ಲ. ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಇದು ಮೊದಲೇ ಗೊತ್ತಿತ್ತು ಎಂದಿದ್ದಾರೆ. ಸ್ವಾಮೀಜಿಗಳೂ ಸಭೆ ನಡೆಸಿದ್ದಾರೆ. ಮೈಸೂರಿನ ಅಧಿಕಾರಿಗಳು, ಚಿತ್ರದುರ್ಗದ ಅಧಿಕಾರಿಗಳು ಸಮನ್ವಯದಲ್ಲಿದ್ದಾರೆ ಎಂದರು.