ಮೈಸೂರು: ಮುರುಘಾ ಮಠದ ಶರಣರು ಬಕಾಸುರರಂತೆ ವರ್ತಿಸಿದ್ದಾರೆ. ಬಕಾಸುರ ಸರದಿ ಪ್ರಕಾರ ಎಲ್ಲರನ್ನೂ ಭಕ್ಷಿಸುತ್ತಿದ್ದಂತೆ ಮಠದಲ್ಲಿ ಓದುತ್ತಿದ್ದ ಮಕ್ಕಳ ಮೇಲೆ ಸರದಿ ಪ್ರಕಾರ ದೌರ್ಜನ್ಯ ಎಸಗಿದ್ದಾರೆ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಆರೋಪ ಮಾಡಿದ್ದಾರೆ.
ಇದು ಇಬ್ಬರು ಮಕ್ಕಳಿಗೆ ಆಗಿರುವ ತೊಂದರೆಯಲ್ಲ. ಮಠದಲ್ಲಿ ಓದುತ್ತಿರುವ ಬಹುತೇಕ ಹೆಣ್ಣು ಮಕ್ಕಳಿಗೆ ಸ್ಚಾಮೀಜಿ ಹೀಗೆ ಲೈಂಗಿಕ ಕಿರುಕುಳ ಕೊಡುತ್ತಾ ಬಂದಿದ್ದಾರೆ. ಇದು ನಿನ್ನೆಯ ಆಗಿರುವ ಕಿರುಕುಳವಲ್ಲ. ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ. ಆದರೆ ಮಕ್ಕಳು ಭಯದಿಂದ ಈ ವಿಚಾರವನ್ನು ಬಹಿರಂಗಗೊಳಿಸಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ.
ನಾವು ಯಾವುದೇ ಒತ್ತಡ, ಬೆದರಿಕೆಗೆ ಬಗ್ಗುವುದಿಲ್ಲ. ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಇಡೀ ಸಮಾಜದ ಕರ್ತವ್ಯ. ಇದಕ್ಕೆ ನಾವು ಬದ್ದರಾಗಿದ್ದೇವೆ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಹೇಳಿದ್ದಾರೆ.
ಈ ಪ್ರಕರಣ ಗಂಭೀರ ಸ್ವರೂಪದ್ದಾಗಿರುವ ಕಾರಣ, ನ್ಯಾಯಾಧೀಶರ ಮೂಲಕವೇ ತನಿಖೆ ಆಗಬೇಕು. ಸ್ವಾಮೀಜಿಯವರಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅತ್ಯಂತ ಪ್ರಭಾವಿಗಳಾಗಿದ್ದಾರೆ. ಮಕ್ಕಳು ಅಷ್ಟು ದೂರದಿಂದ ಇಲ್ಲಿಗೆ ಬಂದಿರೋದೆ ನ್ಯಾಯ ಸಿಗುತ್ತೆ ಎಂಬ ಭರವಸೆಯಿಂದ. ಹಾಗಾಗಿ ಮಕ್ಕಳಿಗೆ ನ್ಯಾಯ ಸಿಗಬೇಕಾದರೆ ನ್ಯಾಯಾಂಗ ತನಿಖೆಯೇ ಆಗಬೇಕು ಎಂದು ಒಡನಾಡಿ ಮುಖ್ಯಸ್ಥ ಪರಶು ಒತ್ತಾಯ ಮಾಡಿದ್ದಾರೆ.