ಚಿತ್ರದುರ್ಗ: ಮುರುಘಾ ಮಠ ಶರಣರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳ ಆರೋಪ ಬಗ್ಗೆ ಮೈಸೂರಿನಲ್ಲಿ ದೂರು ದಾಖಲಾದ ಹಿನ್ನಲೆಯಲ್ಲಿ ಈ ಬಗ್ಗೆ ಚಿತ್ರದುರ್ಗದ ಮುರುಘಾ ಮಠದ ವಕೀಲ ವಿಶ್ವನಾಥಯ್ಯ ಮಾತನಾಡಿದ್ದಾರೆ.
ಮಾಧ್ಯಮಗಳಲ್ಲಿ ಬಂದ ಸುದ್ದಿಯಿಂದ ಮುರುಘಾ ಮಠದ ಶರಣರಿಗೆ ನೋವಾಗಿದೆ. ಮಕ್ಕಳು ಮೈಸೂರು ಠಾಣೆಯಲ್ಲಿ ದೂರು ದಾಖಲಿಸಿರುವ ವಿಚಾರ ಗೊತ್ತಾಗಿದೆ. ದೂರಿನ ಪೂರ್ಣ ವಿವರ ನಮಗೆ ಗೊತ್ತಿಲ್ಲ. ಇದರಿಂದ ಸ್ವಾಮೀಜಿ ಅವರಿಗೆ ಬಹಳ ನೋವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದರು.
ಆದರೆ, ಯಾವುದೋ ಮಠದ ವಿರೋಧಿ ಶಕ್ತಿ ಅತೀ ಆಸೆಯಿಂದ ಇಂಥ ಕೆಲಸ ಮಾಡಿರಬಹುದು. ಮಕ್ಕಳನ್ನ ದುರ್ಬಳಕೆ ಮಾಡಿಕೊಂಡು ದೂರು ನೀಡಿದ್ದಾರೆ ಎನ್ನಬಹುದು. ಇದರ ಹಿಂದೆ ವಿರೋಧಿ ಶಕ್ತಿಗಳ ಕೈವಾಡ ಇದೆ ಎಂದು ತಿಳಿದು ಬಂದಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಹೆಚ್ಚಿನದಾಗಿ ದೂರಿನ ಅಂಶಗಳು ಬಂದ ಮೇಲೆ ಸ್ವಾಮೀಜಿ ಮಾತನಾಡುತ್ತಾರೆ. ಈ ಕುರಿತು ಕಾನೂನು ಹೋರಾಟ ಮಾಡುತ್ತೇವೆ. ಅವರು ತಪ್ಪು ದೂರು ನೀಡಿದ್ದರೆ ಮುರುಘೇಶ ಅವರಿಗೆ ಬುದ್ದಿ ನೀಡಲಿ. ತಪ್ಪಿನ ಅರಿವಾಗಿ ಅವರು ಕೇಸ್ ವಾಪಸ್ ಪಡೆಯಲಿ. ಎಲ್ಲಾ ಭಕ್ತ ವೃಂದದ ಪರವಾಗಿ ದೇವರಲ್ಲಿ ಪ್ರಾರ್ಥಿಸುವೆ ಎಂದರು.
ಇನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೌಂಟರ್ ಕೇಸ್ ವಿಚಾರವಾಗಿ ಮಾತನಾಡಿ, ಅವರ ವಿರುದ್ದವೂ ಕೂಡಾ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ. ದೂರು ದಾರರಿಗೂ ಸ್ವಾಮೀಜಿ ಕಿರುಕುಳ ನೀಡಿದ್ದರು ಎಂಬುದು ತಿಳಿದು ಬಂದಿದೆ.