ಬೆಂಗಳೂರು: ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಜೊತೆ ಸುದೀರ್ಘವಾಗಿ ಮಾತಾಡಿದ್ದೇನೆ. ಕರ್ನಾಟಕದ ರಾಜಕೀಯ ಪರಿಸ್ಥಿತಿಗಳ ಅವರು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಗಾಗ್ಗೆ ಕರ್ನಾಟಕಕ್ಕೆ ಬನ್ನಿ ಎಂದು ಪ್ರಧಾನಿಗೆ ಮನವಿ ಮಾಡಿದ್ದೇನೆ. 2023 ವಿಧಾನಸಭೆಯಲ್ಲಿ ಸುಮಾರು 140ಕ್ಕೂ ಹೆಚ್ಚು ಸೀಟು ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಭರವಸೆ ಕೊಟ್ಟಿದ್ದೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಿನ್ನೆ ನವದೆಹಲಿಯಲ್ಲಿ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಹಾಗೂ ಜೆ.ಪಿ ನಡ್ಡಾ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಬಿಎಸ್ವೈ, ಸೆಪ್ಟೆಂಬರ್ 2 ರಂದು ಮೋದಿ ಮಂಗಳೂರಿಗೆ ಬಂದಾಗ ಲಕ್ಷಾಂತರ ಜನ ಸೇರಿಸಿ ದೊಡ್ಡ ಕಾರ್ಯಕ್ರಮ ಮಾಡುತ್ತೇವೆ. ಸಚಿವರು ಎಲ್ಲರೂ ಸೇರಿ ನಾವು ರಾಜ್ಯದಲ್ಲಿ ಪ್ರವಾಸ ಮಾಡುತ್ತೇವೆ. ಯಾವುದೇ ಶಕ್ತಿ ನಾವು ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ. ಮತ್ತೆ ಪಕ್ಷ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇವೆ ಎಂದರು.
ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಜನ ಆಶೀರ್ವಾದ ಮಾಡುವ ವಿಶ್ವಾಸ ನನಗಿದೆ. ಮೋದಿಯವರಿಗೆ ಆಗಾಗ ರಾಜ್ಯಕ್ಕೆ ಹೆಚ್ಚು ಬರಬೇಕು ಅಂತಾ ಹೇಳಿದ್ದೇನೆ, ಅವರು ಒಪ್ಪಿಕೊಂಡಿದ್ದಾರೆ. ನಡ್ಡಾ ಜೊತೆಯೂ ತಿಂಗಳಿಗೊಮ್ಮೆ ಒಂದೊಂದು ಕಾರ್ಯಕ್ರಮಕ್ಕೆ ಬರಬೇಕು ಅಂತಾ ಹೇಳಿದ್ದೇನೆ, ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ನ ಭ್ರಮಗೆ ಅವಕಾಶ ಕೊಡದೇ ನಾವೆಲ್ಲರೂ ಒಟ್ಟಾಗಿ ಸೇರಿ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ. 140 ಕ್ಕೂ ಹೆಚ್ಚು ಸ್ಥಾನ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ. ಇನ್ನೂ ನಾಲ್ಕಾರು ದಿನಗಳಲ್ಲಿ ನಾವು ಒಟ್ಟಿಗೆ ಸೇರಿ ಪ್ರವಾಸ ಮಾಡುತ್ತೇವೆ ಎಂದು ಬಿಎಸ್ವೈ ಹೇಳಿದರು.
ರಾಜ್ಯ ಸರ್ಕಾರದ ಮೇಲೆ 40% ಕಮಿಷನ್ ಆರೋಪ ವಿಚಾರವಾಗಿ ಮಾತನಾಡಿ, ಮೂರ್ಖರು ಮಾತಾಡುತ್ತಾರೆ. ಯಾವನೋ ಒಬ್ಬನಿಗೆ ಹೇಳಿಕೊಟ್ಟು ಮಾತಾಡಿಸಿದ ತಕ್ಷಣ ಸುಳ್ಳು ಸತ್ಯ ಆಗಲು ಸಾಧ್ಯವಿಲ್ಲ. ಲೋಕಾಯುಕ್ತಕ್ಕೆ ಬೇಕಾದರೆ ದೂರು ಕೊಟ್ಟು ತನಿಖೆ ಮಾಡಿಸಲಿ ನಮ್ಮದು ಯಾವುದೇ ಅಭ್ಯಂತರವಿಲ್ಲ. ಸುಮ್ನೆ ಅನಗತ್ಯ ಆರೋಪ ಮಾಡಿ ಅದನ್ನು ದೊಡ್ಡದು ಮಾಡುವ ಪ್ರಯತ್ನವನ್ನು ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ನಡಿಸುತ್ತಿದ್ದಾರೆ.
ಬಹುಷ: ಇದರಿಂದ ಅವರದ್ದು ಏನೂ ನಡೆಯುವುದಿಲ್ಲ. ವಿಧಾನ ಮಂಡಲ ಅಧಿವೇಶನದಲ್ಲಿ ಈ ಬಗ್ಗೆ ತಕ್ಕ ಉತ್ತರ ನಾವು ಕೊಡುತ್ತೇವೆ. ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀರಲ್ಲ. ಇದು ಸುಳ್ಳು ಆರೋಪ ಅಂತಾ ಶ್ರೀಸಾಮಾನ್ಯನಿಗೂ ಗೊತ್ತಿದೆ ಎಂದು ಬಿಎಸ್ವೈ ತಿಳಿಸಿದರು.