Wednesday, January 22, 2025

ನಾವೇ ‘ಲಕ್ಕಿಮ್ಯಾನ್ಸ್’ ಎಂದ ಯುವ, ಕಿಚ್ಚ & ಪ್ರಭುದೇವ

ಲಕ್ಕಿಮ್ಯಾನ್ ಸಿನಿಮಾನ ಬೆಳ್ಳಿಪರದೆ ಮೇಲೆ ಕಣ್ತುಂಬಿಕೊಳ್ಳೋಕೆ ಸಜ್ಜಾಗಿರೋ ಸಮಸ್ತ ಏಳು ಕೋಟಿ ಕನ್ನಡಿಗರೇ ಒಂಥರಾ ಲಕ್ಕಿಮ್ಯಾನ್ಸ್. ಕಾರಣ ಇದು ಬೆಲೆಕಟ್ಟಲಾಗದ ಬೆಟ್ಟದ ಹೂವು ಅಪ್ಪು ನಟನೆಯ ಕಟ್ಟ ಕಡೆಯ ಕಮರ್ಷಿಯಲ್ ಎಂಟರ್​ಟೈನರ್. ಡ್ಯಾನ್ಸ್ ಕಿಂಗ್ ಪ್ರಭುದೇವ, ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್, ದೊಡ್ಮನೆ ಯುವರಾಜನಿಂದ ರಂಗೇರಿದ ಲಕ್ಕಿಮ್ಯಾನ್ ಇವೆಂಟ್​ನ ಹೈಲೈಟ್ಸ್ ನಿಮಗಾಗಿ ಕಾಯ್ತಿದೆ. ಹಾಗಾದರೆ ಈ ಸ್ಟೋರಿ ಓದಿ.

  • ಇದು ಅಪ್ಪು- ಪ್ರಭುದೇವ ಪವರ್​ಫುಲ್ ಡ್ಯಾನ್ಸ್ ಧಮಾಕ
  • ಈ ಚಿತ್ರ ಮತ್ತೆ ಸಿಗಲ್ಲ, ಎಲ್ರೂ ಅಪ್ಪಿಕೊಂಡು ನೋಡಿ- ಕಿಚ್ಚ
  • ಪುನೀತ್ ಡ್ರೀಮ್ ಪ್ರಾಜೆಕ್ಟ್ಸ್​​ನ ಬಿಚ್ಚಿಟ್ಟ ದೊಡ್ಮನೆ ರಾಘಣ್ಣ..!

ಯೆಸ್.. ಲಕ್ಕಿಮ್ಯಾನ್ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಇದೊಂದು ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಅಪ್ಪು ಅನ್ನೋ ಎಮೋಷನ್ ಅನ್ನಬಹುದು. ಕಾರಣ ಅವ್ರ ಕಡೆಯ ಕಮರ್ಷಿಯಲ್ ಸಿನಿಮಾನೂ ಹೌದು, ದೇವರ ರೂಪದಲ್ಲಿ ಮತ್ತೆ ಕನ್ನಡಿಗರಿಗೆ ದರ್ಶನ ನೀಡಲಿರೋ ಬೆಟ್ಟದ ಹೂವೂ ಹೌದು. ಹಾಗಾಗಿ ಬಹಳ ವಿಶಿಷ್ಠ ಹಾಗೂ ಅತ್ಯಮೂಲ್ಯ ಸಿನಿಮಾ ಆಗಲಿದೆ ಲಕ್ಕಿಮ್ಯಾನ್.

ಡ್ಯಾನ್ಸ್​ಕಿಂಗ್ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಷಿಣಿ ಪ್ರಕಾಶ್ ಮುಖ್ಯಭೂಮಿಕೆಯಲ್ಲಿದ್ದಾರೆ. ಆದ್ರೆ ಪುನೀತ್ ರಾಜ್​ಕುಮಾರ್​ರ ಸ್ಪೆಷಲ್ ಅಪಿಯರೆನ್ಸ್ ಚಿತ್ರದ ಸ್ಟ್ರೆಂಥ್. ಅಷ್ಟೇ ಯಾಕೆ ಅಪ್ಪು- ಪ್ರಭುದೇವ ಡ್ಯಾನ್ಸ್ ಕಣ್ಣಿಗೆ ಹಬ್ಬ ನೀಡಲಿದೆ. ಇದೇ ಸೆಪ್ಟೆಂಬರ್ 9ಕ್ಕೆ ಸಿನಿಮಾ ತೆರೆಗೆ ಬರ್ತಿದ್ದು, ಅದಕ್ಕೂ ಮುನ್ನ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯ್ತು ಲಕ್ಕಿಮ್ಯಾನ್ ಆಡಿಯೋ ಲಾಂಚ್ ಇವೆಂಟ್.

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೊಡ್ಮನೆಯ ಕಲಾವಿದರ ಜೊತೆ ಕಿಚ್ಚ ಸುದೀಪ್ ಹಾಗೂ ಪ್ರಭುದೇವ ಎಲ್ಲರ ಗಮನ ಸೆಳೆದರು. ಇದು ನಿಜಕ್ಕೂ ಮತ್ತೆ ಸಿಗೋ ಸಿನಿಮಾ ಅಲ್ಲ, ಹೊರಗೆ ಬಂದು, ಎಲ್ರೂ ಅಪ್ಪಿಕೊಂಡು ನೋಡಬೇಕಾದ ಚಿತ್ರ ಅಂತ ಸುದೀಪ್ ಅಪ್ಪು ಮೇಲಿನ ಅಭಿಮಾನ ಹೊರಹಾಕಿದ್ರು.

ನನ್ನ ತಮ್ಮನಿಗೆ ಸಿನಿಮಾ ಡೈರೆಕ್ಟ್ ಮಾಡೋಕೆ ಮೊದಲು ಚಾನ್ಸ್ ಕೊಟ್ರೆ, ಆಮೇಲೆ ಅಪ್ಪು ಅವ್ರೇ ಡ್ಯಾನ್ಸ್ ಮಾಡೋಕೆ ಸೆಕೆಂಡ್ ಚಾನ್ಸ್ ಕೊಟ್ರು ಅಂತ ಪ್ರಭುದೇವ ನೆನಪಿನ ಬುತ್ತಿ ಬಿಚ್ಚಿಟ್ರು.

46 ವರ್ಷ ಅದೃಷ್ಟದಿಂದ ಕೂಡಿತ್ತು. ಆದ್ರೀಗ ದುರಾದೃಷ್ಟದ ವರ್ಷಗಳಾಗಿವೆ ಅಂತ ಅಪ್ಪು ಫಂಕ್ಷನ್ಸ್​ನ ಅವಾಯ್ಡ್ ಮಾಡ್ಬೇಕು ಅಂದ್ಕೊಂಡ್ರೂ ಮಾಡೋಕೆ ಆಗ್ತಿಲ್ಲ ಅಂತ ಭಾವುಕರಾದ್ರು ರಾಘಣ್ಣ. ಪ್ರಭುದೇವ, ಮಣಿರತ್ನಂ ರಂತಹ ಲೆಜೆಂಡ್ಸ್ ಜೊತೆ ಅಪ್ಪುಗೆ ನಟಿಸೋ ಆಶಯವಿತ್ತು ಅಂತ ಪುನೀತ್ ರಾಜ್​ಕುಮಾರ್ ಕನಸುಗಳನ್ನ ರಿವೀಲ್ ಮಾಡಿದ್ದಾರೆ.

ಚಿಕ್ಕಪ್ಪನ ಡ್ಯಾನ್ಸ್ ನೋಡೋಕೆ ಕಾಯ್ತಿದ್ದೀವಿ ಎಂದ ಯುವರಾಜ್ ಹಾಗೂ ವಿನಯ್ ರಾಜ್, ಈ ಸಿನಿಮಾ ನೋಡೋ ನಾವೇ ನಿಜಕ್ಕೂ ಲಕ್ಕಿ ಅಂತಾರೆ.

ಅಪ್ಪು, ಸುದೀಪ್, ಪ್ರಭುದೇವ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದ ಸಾಧು ಕೋಕಿಲಾ, ತಮ್ಮ ಬ್ಯಾಗ್ರೌಂಡ್ ಸ್ಕೋರ್ ಬಗ್ಗೆ ಮುಕ್ತವಾಗಿ ಮಾತನಾಡಿದ್ರು.

ಒಟ್ಟಾರೆ ಲಕ್ಕಿಮ್ಯಾನ್ ಕನ್ನಡ ಚಿತ್ರರಂಗದ ಮಟ್ಟಿಗೆ ಸ್ಪೆಷಲ್ ಸಿನಿಮಾ. ಅಪ್ಪು ಅಭಿಮಾನಿಗಳಷ್ಟೇ ಅಲ್ಲದೆ, ಎಲ್ಲಾ ಸ್ಟಾರ್​ಗಳ ಅಭಿಮಾನಿಗಳು ಹಾಗೂ ಕನ್ನಡ ಪ್ರೇಕ್ಷಕರು ಈ ಸಿನಿಮಾಗಾಗಿ ಕಾತರರಾಗಿದ್ದಾರೆ. ಕೆಆರ್​ಜಿ ಸ್ಟುಡಿಯೋಸ್ ಬ್ಯಾನರ್​ನಡಿ ಈ ಸಿನಿಮಾ ತೆರೆಗಪ್ಪಳಿಸುತ್ತಿದ್ದು, ಫ್ರೆಶ್ ಫೀಲ್ ಕೊಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES