Monday, December 23, 2024

ಡೊಳ್ಳುಗೆ ಸಿದ್ದರಾಮಯ್ಯ ಫಿದಾ.. ಇಂಡಸ್ಟ್ರಿ ಬಹುಪರಾಕ್

ನ್ಯಾಷನಲ್, ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ಸದ್ದು ಮಾಡ್ತಿರೋ ಡೊಳ್ಳು ಸಿನಿಮಾಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಹುಪರಾಕ್ ಹೇಳಿದ್ದಾರೆ. ಜನಪದ ಕಲೆಯ ರೋಚಕ ಜರ್ನಿಗೆ ಸ್ಯಾಂಡಲ್​ವುಡ್ ತಾರೆಯರೂ ಸಹ ಫಿದಾ ಆಗಿದ್ದಾರೆ. ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಹಾಗೂ ಅಪೇಕ್ಷಾ ನಿರ್ಮಾಣದ ಈ ಚಿತ್ರದ ಕುರಿತ ಇಂಟರೆಸ್ಟಿಂಗ್ ಸ್ಟೋರಿ ನೀವೇ ಓದಿ.

  • ಗ್ರಾಮೀಣ ಪ್ರದೇಶದ ಜನಪದ ಕಲೆ ಉಳಿಯಬೇಕು- ಸಿದ್ದು
  • ಗೂಗ್ಲಿ, ರಣವಿಕ್ರಮ ಸಾರಥಿಯಿಂದ ತಯಾರಾದ ಪ್ರಯೋಗ
  • ಕಮರ್ಷಿಯಲ್ ಸಿನಿಮಾಗಳಂತೆ ಥಿಯೇಟರ್​ನತ್ತ ಡೊಳ್ಳು..!

ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ, ಸುಮಾರು 20ಕ್ಕೂ ಅಧಿಕ ನ್ಯಾಷನಲ್ ಹಾಗೂ ಇಂಟರ್​ನ್ಯಾಷನಲ್ ಅವಾರ್ಡ್​ಗಳನ್ನ ಮುಡಿಗೇರಿಸಿಕೊಂಡಿದೆ. ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳಲ್ಲಿ ಪ್ರದರ್ಶನ ಕಂಡು, ಎಲ್ಲರ ಹುಬ್ಬೇರಿಸಿದ್ದ ದೇಸಿ ಜನಪದ ಕಲೆಯ ಈ ಸಿನಿಮಾ, ಇದೇ ವಾರ ದೊಡ್ಡ ಪರದೆ ಮೇಲೆ ಮೂಡಲಿದೆ.

ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್​ನಿಂದ ಭರವಸೆ ಮೂಡಿಸಿರೋ ಈ ಪ್ರಯೋಗ, ರಿಲೀಸ್ ಡೇಟ್ ಹತ್ತಿರ ಆಗ್ತಿದ್ದಂತೆ ಜೋರಾಗೇ ಸದ್ದು ಮಾಡ್ತಿದೆ. ರೀಸೆಂಟ್ ಆಗಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವ್ರು ಸಿನಿಮಾನ ವೀಕ್ಷಿಸಿದ್ದು, ಜನಪದ ಕಲೆಯ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೌದು.. ನಾನಾ ಕಾರಣಗಳಿಂದ ಚಿತ್ರಪ್ರೇಮಿಗಳನ್ನು ಆವರಿಸಿಕೊಳ್ಳುತ್ತಿರುವ ಡೊಳ್ಳು ಸಿನಿಮಾವನ್ನು ವಿಪಕ್ಷ ನಾಯಕ,  ಸಿದ್ದರಾಮಯ್ಯ ನಿನ್ನೆ ಬೆಂಗಳೂರಿನ ಒರಾಯನ್ ಮಾಲ್​ನಲ್ಲಿ ಕಣ್ತುಂಬಿಕೊಂಡು, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜಕೀಯದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಸಿನಿಮಾ ವೀಕ್ಷಣೆ ಮಾಡಿದ ಅವ್ರು, ಸಿನಿಮಾ ತುಂಬಾ ಚೆನ್ನಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಜನಪದ ಕಲೆಯನ್ನು ಬೆಳೆಸಬೇಕು, ಉಳಿಸಬೇಕು ಅನ್ನೋ ನಿಟ್ಟಿನಲ್ಲಿ ಸಿನಿಮಾ ಮಾಡಿದ್ದಾರೆ. ಕಲೆಗೆ ಜಾತಿ, ಧರ್ಮ, ಲಿಂಗಭೇದ ಯಾವುದೂ ಇರುವುದಿಲ್ಲ. ನಾಡಿನ ಸಾಂಪ್ರದಾಯಿಕ ಡೊಳ್ಳು ಬಾರಿಸುವ ಕಲೆಯನ್ನು ಪ್ರಧಾನವಾಗಿರಿಸಿಕೊಂಡು ನಿರ್ಮಿಸಿದ ಈ ಸಿನಿಮಾ ಅತ್ಯಂತ ಸೊಗಸಾಗಿ ಮೂಡಿಬಂದಿದೆ. ಚಿತ್ರ ತಂಡಕ್ಕೆ ನನ್ನ ಶುಭ ಹಾರೈಕೆಗಳು.  ಇಂತಹ ಸಿನಿಮಾಗಳು ಬರಬೇಕು. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಶುಭ ಹಾರೈಸಿದರು.

ಇದೇ ವೇಳೆ ಶಾಸಕ ಜಮೀರ್ ಅಹಮದ್ ಖಾನ್, ಇಡೀ ಚಿತ್ರತಂಡ ಹಾಜರಿತ್ತು. ತನ್ನ ವಿಭಿನ್ನ ಕಂಟೆಂಟ್ ಜೊತೆಗೆ ರಾಷ್ಟ್ರಪ್ರಶಸ್ತಿಗೂ ಭಾಜನವಾಗಿರುವ, ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದಿರುವ ಡೊಳ್ಳು ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೆಶನ ಮಾಡಿದ್ದು, ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗಡೆ ಜೊತೆಗೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್​ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಸಿದ್ದರಾಮಯ್ಯನವರಿಗೂ ಮುನ್ನ ಇಂಡಸ್ಟ್ರಿಯ ಸಾಕಷ್ಟು ಗಣ್ಯರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಡಿನ ಜಾನಪದ ಕಲೆಯನ್ನು ಜಗತ್ತಿನ ಮುಂದೆ ತೆರೆದಿಡುವಂತಹ ಈ ಸಿನಿಮಾವನ್ನು ಒಡೆಯರ್ ಮೂವೀಸ್ ಬ್ಯಾನರ್ ನಡಿ ಪವನ್ ಒಡೆಯರ್ ಹಾಗೂ ಅವ್ರ ಪತ್ನಿ ಅಪೇಕ್ಷಾ ಜೊತೆಗೂಡಿ ನಿರ್ಮಾಣ ಮಾಡಿದ್ದಾರೆ. ಆಗಸ್ಟ್​ 26ರಂದು ‘ಡೊಳ್ಳು’ ಚಿತ್ರ ರಾಜ್ಯಾದ್ಯಂತ ರಿಲೀಸ್​ ಆಗಲಿದೆ. ಸಂಭಾಷಣೆ ಮತ್ತು ಚಿತ್ರಕಥೆಯನ್ನು ಶ್ರೀನಿಧಿ ಬರೆದಿದ್ದಾರೆ. ಅನಂತ್ ಕಾಮತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಭಿಲಾಷ್ ಕಲಾಥಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಈ ಚಿತ್ರವನ್ನು ನೋಡುವಂತೆ ರಾಜ್ಯಪಾಲರಾದ ಥಾವರ್ ಚಂದ್​ ಗೆಹ್ಲೋಟ್ ಅವರಿಗೂ ಚಿತ್ರತಂಡ ಇತ್ತೀಚೆಗೆ ಆಮಂತ್ರಣ ನೀಡಿತ್ತು. ಶೀಘ್ರದಲ್ಲಿಯೇ ರಾಜ್ಯಪಾಲರು ಸಿನಿಮಾ ವೀಕ್ಷಣೆ ಮಾಡಲಿದ್ದಾರಂತೆ. ಒಟ್ಟಾರೆ ಕಮರ್ಷಿಯಲ್ ಸಿನಿಮಾಗಳಂತೆ ಈ ಜನಪದ ಸೊಗಡಿನ ಚಿತ್ರ ಥಿಯೇಟರ್​ಗಳಲ್ಲಿ ಬೆಳ್ಳಿ ಪರದೆ ಬೆಳಗುತ್ತಿರೋದು ನಿಜಕ್ಕೂ ಗ್ರೇಟ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES