ಬೆಂಗಳೂರು: ರಾಜ್ಯ ಗುತ್ತಿಗೆದಾರ ಸಂಘ ಇಂದು ಬಂದು ನನ್ನನ್ನ ಭೇಟಿ ಮಾಡಿದ್ದಾರೆ. ಒಂದು ಮನವಿಯನ್ನ ಕೊಟ್ಟು ಹೋಗಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಶರವೇಗದಲ್ಲಿ ಹೋಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ಅರಣ್ಯ ಇಲಾಖೆ ಗುತ್ತಿಗೆದಾರರು ಬಂದು ಭೇಟಿ ಮಾಡಿದ್ದರು, ಸರ್ಕಾರ ಇದುವರೆಗೂ ಕ್ರಮ ತೆಗದುಕೊಂಡಿಲ್ಲ. ಶೇಕಡ 30 ರಿಂದ 40 ರಷ್ಟು ಕಮಿಷನ್ ಕೇಳ್ತಿದ್ದಾರೆ. ಕಾಮಗಾರಿ ಮುನ್ನವೇ ಲಂಚ ಕೊಡ್ಬೇಕು. ನ್ಯಾಯಾಂಗ ತನಿಖೆಯಾದ್ರೆ ದಾಖಲೆ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಭ್ರಷ್ಟಾಚಾರವನ್ನ ಸಾಬೀತು ಪಡಿಸಬೇಕೆಂದು ನೀವು ಏನ್ ಹೇಳಿದ್ರೂ ಕೇಳುತ್ತೇವೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ಎಲ್ಲ ಕಾಲದಲ್ಲೂ ಇತ್ತು. ಆದ್ರೆ ಬಿಜೆಪಿ ಸರ್ಕಾರದಲ್ಲಿ ಶರವೇಗದಲ್ಲಿ ಕಮಿಷನ್ ಇದೆ. ಇದನ್ನ ನಾನು ಹೇಳ್ತಿಲ್ಲ ರಾಜ್ಯ ಗುತ್ತಿಗೆದಾರರು ಹೇಳುತ್ತಿದ್ದಾರೆ.
ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ನಾನು ಇದನ್ನ ಮತ್ತೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಮಾಜಿ ಸಿಎಂ ತಿಳಿಸಿದರು.
ನೀವು ಪ್ರಾಮಾಣಿಕರಾಗಿದ್ರೆ ಸರ್ಕಾರ ನ್ಯಾಯಾಂಗ ತನಿಖೆ ಕೊಡಲಿ, ನ್ಯಾಯಾಂಗ ತನಿಖೆ ಮಾಡಲು ಭಯವೇಕೆ. ನ್ಯಾಯಾಂಗ ತನಿಖೆ ಒಪ್ಪದೇ ಇದ್ರೆ ಜನರು ತೀರ್ಮಾನ ಮಾಡ್ತಾರೆ. ನೀವು ಬಂಡತನ ಮಾಡಿದ್ರೆ ಜನರೇ ನೋಡ್ತಾರೆ. ಸಚಿವ ಮುನಿರತ್ನ ಕಮಿಷನ್ ಕಲೆಕ್ಷನ್ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಬೇರೆ ಬೇರೆ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಗಮನಕ್ಕೆ ತಂದಿದ್ದಾರೆ ಎಂದು ಆರೋಪ ಮಾಡಿದರು.