ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಕಮಿಷನ್ ಕಾಟದಿಂದ ಬೇಸತ್ತು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಗುತ್ತಿಗೆದಾರರ ಸಂಘ ಸಿಎಂಗೆ ಪತ್ರ ಬರೆದಿದೆ. ಕಮಿಷನ್ ಸರ್ಕಾರದ ಸಿಎಂ ಬೊಮ್ಮಾಯಿ ಅವರೇ ನಿಮಗೆ ಸಂತೋಷ್ ಪಾಟೀಲ್‌ರಂತೆ ಇನ್ನೆಷ್ಟು ಬಲಿ ಬೇಕು. 40% ಸರ್ಕಾರದ ಕಮಿಷನ್ ನಿಲ್ಲುವುದು ಯಾವಾಗ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಸ್ವತಃ ಗುತ್ತಿಗೆದಾರರಾಗಿದ್ದ ಸಚಿವ ಮನಿರತ್ನ ಸಚಿವ ಸ್ಥಾನ ಸಿಕ್ಕಿದ್ದೇ ತಡ ಗುತ್ತಿಗೆದಾರರನ್ನೇ ದೋಚಲು ಶುರು ಮಾಡಿದ್ದಾರೆ. 40% ಕಮಿಷನ್ ಸರ್ಕಾರ ಅಧಿಕಾರಿಗಳನ್ನೇ ವಸೂಲಿಗೆ ಬಳಸಿಕೊಳ್ಳುತ್ತಿದೆ ಎಂದು ಗುತ್ತಿಗೆದಾರರ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳ ಬಂಧನವಾಗಿದ್ದು ಇದಕ್ಕೆ ಪುಷ್ಠಿ ಕೊಡುತ್ತದೆ. ರೌಡಿಸಂ ಮೂಲಕ ಭ್ರಷ್ಟಾಚಾರ ನಡೆಸುತ್ತಿರುವ ಸಚಿವ ಮುನಿರತ್ನರ ರಾಜೀನಾಮೆ ಯಾವಾಗ ರಾಜೀನಾಮೆ ಪಡೆಯುವಿರಿ. ತನಿಖೆ ನಡೆಸಿ ತಮ್ಮ ಪಾರದರ್ಶಕತೆ ಯಾವಾಗ ತೋರಿಸುವಿರಿ ಎಂದು ಬೊಮ್ಮಾಯಿ ಅವರನ್ನ ಕಾಂಗ್ರೆಸ್ ಕೇಳಿದೆ.
ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 50%, ಕೆಲವೆಡೆ 40%, ಇನ್ನು ಕೆಲವೆಡೆ 100% ಹಲವು ಕಡೆ ಕೆಲಸವನ್ನೇ ಮಾಡದೆ ಸಂಪೂರ್ಣ ಹಣ ಬಿಡುಗಡೆಯಾಗಿದೆ ಎನ್ನುವುದು ಗುತ್ತಿಗೆದಾರರ ಆರೋಪವಾಗಿದೆ. ಅಲ್ಲಿಗೆ ಬಿಜೆಪಿಯ ಕಮಿಷನ್ 100% ಗೆ ತಲುಪಿದಂತಾಯ್ತು. ಪೆಟ್ರೋಲ್ ದರಕ್ಕಿಂತ ವೇಗವಾಗಿ ಬಿಜೆಪಿ ಸರ್ಕಾರದ ಕಮಿಷನ್ ದರ ಏರಿಕೆಯಾಗುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.