ಬೆಳಗಾವಿ : ಕಳೆದ 19 ದಿನಗಳಿಂದ ಕುಂದಾನಗರಿ ಜನರ ನಿದ್ದೆಗೆಡಿಸಿದ್ದ ಚಿರತೆ ಹುಟುಕಾಟಕ್ಕಾಗಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ನಿರಂತರ ಶೋಧ ನಡೆಸುತ್ತಿದೆ. ಸೋಮವಾರ ಎರಡೆರಡು ಬಾರಿ ಪ್ರತ್ಯಕ್ಷವಾಗಿದ್ದ ಚಿರತೆ, ಅರಣ್ಯ ಇಲಾಖೆ ಸಿಬ್ಬಂದಿ ಎದುರೇ ಐದೇ ಸೆಕೆಂಡ್‌ಗಳಲ್ಲಿ ಹಿಂಡಲಗಾ ರಸ್ತೆ ಬಳಿ ಮಾಯವಾಗಿತ್ತು. ಚಿರತೆಯನ್ನು ಸೆರೆಹಿಡಿಯಲು ಬೆಂಗಳೂರಿನಿಂದ ಡ್ರೋಣ್ ತಜ್ಞರು ಅತ್ಯಾಧುನಿಕ ಇನ್‌ಫ್ರಾರೆಡ್ ಕ್ಯಾಮರಾಗಳ ಸಮೇತ ಆಗಮಿಸಿದ್ದರು. ಆದ್ರೆ, ತಾಂತ್ರಿಕ ಕಾರಣದಿಂದ ಡ್ರೋಣ್ ಹಾರಾಡಲಿಲ್ಲ ಮತ್ತೊಂದೆಡೆ ಡ್ರೋನ್ ಹಾರಾಟಕ್ಕೆ ರಕ್ಷಣಾ ಇಲಾಖೆ ಅನುಮತಿ ಸಿಗಲಿಲ್ಲ. ಹೀಗಾಗಿ ಹೈಡೆಫಿನಿಷನ್ ಕ್ಯಾಮರಾಗಳ ಸಹಾಯದಿಂದ ಗಾಲ್ಫ್ ಮೈದಾನದ 250 ಎಕರೆ ಪ್ರದೇಶದಲ್ಲಿ ಚಿರತೆಗಾಗಿ ಶೋಧಕಾರ್ಯ ನಡೆಯುತ್ತಿದೆ. ರಕ್ಷಣಾ ಇಲಾಖೆಗೆ ಸೇರಿದ 250 ಎಕರೆ ಪ್ರದೇಶದಲ್ಲಿ ಇರುವ ಮರ, ಗಿಡ ಕಂಟೆಗಳಿರುವ ದಟ್ಟವಾದ ಪ್ರದೇಶದಲ್ಲಿ ಚಿರತೆ ಅಡಗಿರುವ ಶಂಕೆ ಇದೆ. ಗಾಲ್ಫ್ ಮೈದಾನದ ಒಂದು ಕಿಲೋಮೀಟರ್ ವ್ಯಾಪ್ತಿಯ 22 ಶಾಲೆಗಳಿಗೆ ರಜೆ ನೀಡಲಾಗಿದ್ದು, ಮಕ್ಕಳಿಗೆ ಆನ್‌ಲೈನ್ ಮೂಲಕ ಪಾಠ ಮಾಡಲು ಶಾಲಾ ಆಡಳಿತ ಮಂಡಳಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಇನ್ನು ಗಾಲ್ಫ್ ಮೈದಾನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಸಿಸಿಎಫ್ ಮಂಜುನಾಥ ಚೌಹಾಣ್ ಹಾಗೂ ಡಿಎಫ್ಒ ಆ್ಯಂಥೋನಿ ಮರಿಯಮ್ ಶಾಸಕ ಅನಿಲ್ ಬೆನಕೆಗೆ ಚಿರತೆ ಶೋಧ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಬಿಡಾರದಿಂದ ಎರಡು ಆನೆಗಳು ರಾತ್ರಿ 8 ಗಂಟೆ ಹೊತ್ತಿಗೆ ಬೆಳಗಾವಿ ತಲುಪಲಿವೆ. ಈ ಆನೆಗಳ ಮೂಲಕ ಬುಧವಾರ ಶೋಧ ಮುಂದುವರಿಯಲಿದೆ.
ಚಿರತೆ ಸೆರೆಗೆ 200ಕ್ಕೂ ಹೆಚ್ಚು ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಡ್ರೋಣ್, ಟ್ರ್ಯಾಪ್ ಕ್ಯಾಮರಾ, ಬೋನು ಇರಿಸಿದರೂ ಚಿರತೆ ಸೆರೆ ಹಿಡಿಯಲಾಗುತ್ತಿಲ್ಲ. ಬುಧವಾರ ಎರಡು ಆನೆಗಳ ಸಹಾಯದಿಂದ ಚಿರತೆ ಶೋಧ ಕಾರ್ಯ ನಡೆಯಲಿದ್ದು ಅದು ಸೆರೆ ಸಿಗುತ್ತಾ ಕಾದು ನೋಡಬೇಕು.
ರಾಹುಲ್ ಜೊತೆ ಅಣ್ಣಪ್ಪ ಬಾರ್ಕಿ ಪವರ್ ಟಿವಿ ಬೆಳಗಾವಿ