ಬೆಂಗಳೂರು: ಹುಡುಗಿ ಮೋಹಕ್ಕೆ ಬಿದ್ದು ಬಿಬಿಎಂಪಿ(ಬೆಂಗಳೂರು ಮಹಾನಗರ ಪಾಲಿಕೆ) ಬೊಕ್ಕಸಕ್ಕೆ ನೌಕರನೇ ಕನ್ನ ಹಾಕಿದ ಘಟನೆ ಯಲಹಂಕವಲಯದ ಬ್ಯಾಟರಾಯನಪುರ ಬಿಬಿಎಂಪಿ ಕಚೇರಿಯಲ್ಲಿ ನಡೆದಿದೆ.
ಇಲ್ಲಿನ ಎಸ್ಡಿಎ ನೌಕರ ಪ್ರಶಾಂತ್ ಎಂಬ ಮಹಾಪ್ರೇಮಿ, ಪ್ರಿಯತಮೆ ಅಕೌಂಟ್ ಗೆ ಪಾಲಿಕೆಯ 14.70 ಲಕ್ಷ ರೂ ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾನೆ. ಯಲಹಂಕ ನ್ಯೂಟೌನ್ ನಲ್ಲಿ ಬ್ಯೂಟಿಶಿಯನ್ ಆಗಿ ಪ್ರಕಾಶ್ ಪ್ರಿಯತಮೆ ಕಾಂಚನಾ ಕೆಲಸ ಮಾಡ್ತಿದ್ದಳಂತೆ. ಹೇಗೋ ಪರಿಚಯ ಆಗಿ ಪ್ರೇಮಾಂಕುರ ಆಗಿ, ಪ್ರೇಯಸಿಯ ಬ್ಯೂಟಿಗೆ ಮರುಳಾಗಿ ಗುತ್ತಿಗೆದಾರರಿಗೆ ಪಾವತಿಸಬೇಕಿದ್ದ ಹಣವನ್ನ ಈಕೆಯ ಅಕೌಂಟ್ ಗೆ ಜಮೆ ಮಾಡಿಸಿದ್ದಾನೆ.
ಈ ಹಣದಲ್ಲಿ ಪ್ರಶಾಂತ್ ಹಾಗೂ ಪ್ರೇಯಸಿ ಕಾಂಚನಾ ಚಿನ್ನಾಭರಣ ಖರೀದಿಸಿ, ದರ್ಬಾರ್ ಮಾಡಿದ್ದಾರೆ. ಹಿರಿಯ ಅಧಿಕಾರಿಗಳು ಲೆಕ್ಕಪುಸ್ತಕಗಳನ್ನ ಕೇಳಿದಾಗ ಹಲವು ಬಾರಿ ಲೆಕ್ಕವೇ ತೋರಿಸಿಲ್ಲ. ಇದ್ರಿಂದ ಅನುಮಾನಗೊಂಡ ಪೊಲೀಸರು ಲೆಕ್ಕಪರಿಶೋಧನೆ ನಡೆಸಿದದಾಗ, ಲಕ್ಷಾಂತರ ರೂಪಾಯಿ ವ್ಯತ್ಯಾಸ ಕಂಡುಬಂದಿದೆ. ಬ್ಯಾಂಕ್ ಗೆ ಹೋಗಿ ಅಕೌಂಟ್ ಪರಿಶೀಲಿಸಿದಾಗ ಬಿಬಿಎಂಪಿ ನೌಕರ ಪ್ರಕಾಶ್ ಹಾಗೂ ಕಾಂಚನಳ ಪ್ರೇಮದಾಟ ಬಯಲಾಗಿದೆ.
ಒಂದೂವರೆ ವರ್ಷದಿಂದ ಪಾಲಿಕೆ ಹಣದಲ್ಲಿ ಮೋಜು-ಮಸ್ತಿ ನಡೆಸ್ತಿದ್ದ ಬಗ್ಗೆ ತಿಳಿದುಬಂದಿದ್ದು. ಈ ಸಂಬಂಧ ಯಲಹಂಕ ಕಾರ್ಯಪಾಲಕ ಇಂಜಿನಿಯರ್ ರಾಜೇಶ್ ನಾಯ್ಕ್, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇವ್ರ ಪ್ರೇಮದಾಟದಿಂದ ಪಾಲಿಕೆಯಲ್ಲಿ ಇನ್ನಷ್ಟು ಅಕ್ರಮ ನಡೆದಿರೋ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪಾಲಿಕೆ ಬೊಕ್ಕಸಕ್ಕೆ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಆರೋಪಿ ಪ್ರಕಾಶ್ ಆಸ್ತಿ ಜಪ್ತಿಗೂ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ.