ನವದೆಹಲಿ : ಕೂಡಲೇ ಕನಿಷ್ಠ ಬೆಂಬಲ ಬೆಲೆ ಜಾರಿ ಮಾಡಬೇಕು ಮತ್ತು ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಸಾವಿರಕ್ಕೂ ಅಧಿಕ ರೈತರು ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಹಾಪಂಚಾಯತ್ ಒಂದು ದಿನದ ಶಾಂತಿಯುತ ಕಾರ್ಯಕ್ರಮವಾಗಿದ್ದು, ಇದರ ಭಾಗವಾಗಿ ಇಂದು ಬೆಳಗ್ಗೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೆ ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಿಂದ ರೈತರು ಆಗಮಿಸಿದ್ದರು.
ಕರ್ನಾಟಕದಿಂದ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಅಡಿಯಲ್ಲಿ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ 150ಕ್ಕೂ ಅಧಿಕ ರೈತರು ದೆಹಲಿಗೆ ಆಗಮಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಸುಮಾರು ಇಪ್ಪತ್ತಕ್ಕೂ ಅಧಿಕ ಮಹಿಳಾ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಎಂಎಸ್‍ಪಿ ಮೇಲಿನ ಕಾನೂನು ಖಾತರಿ, ವಿದ್ಯುತ್ ತಿದ್ದುಪಡಿ ಮಸೂದೆ 2022 ರದ್ದತಿ ಹಾಗೂ ರೈತರ ಸಾಲ ಮನ್ನಾ ಸೇರಿದಂತೆ ಕೆಲವು ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ. ದೆಹಲಿ ಹಾಗೂ ಉತ್ತರ ಪ್ರದೇಶ ಗಡಿ ಪ್ರದೇಶವಾದ ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಕಿಡಿಕಾರಿದೆ.