Monday, December 23, 2024

ಕೊರೊನಾ ವೇಳೆ ಹೆಚ್ಚಿನ ಹಣ ಪೀಕಿದ್ದ ಖಾಸಗಿ ಆಸ್ಪತ್ರೆಗಳಿಂದ ಹಣ ವಸೂಲಿ: ಸಚಿವ ಸುಧಾಕರ್

ಬೆಂಗಳೂರು: ಕೋವಿಡ್‌ ರೋಗಿಗಳಿಂದ ಶುಲ್ಕ ಪಡೆಯುವುದರ ಜೊತೆಗೆ, ಸರ್ಕಾರದಿಂದಲೂ ಹಣ ಪಡೆದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ವಹಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, 577 ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಿಸಿದ್ದಾರೆ. ಹಾಗೆಯೇ, 403 ರೋಗಿಗಳ ಕುಟುಂಬಗಳಿಗೆ 1,58,22,359 ರೂ. ಹಣವನ್ನು ಹಿಂದಿರುಗಿಸಿ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ, ರೆಫರಲ್‌ ಆಧಾರದಲ್ಲಿ ಕೋವಿಡ್‌ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಹಿಂದೆಯೇ ಕ್ರಮ ವಹಿಸಲಾಗಿತ್ತು. ಕೋವಿಡ್‌ ರೋಗಿಗಳ ಕುಟುಂಬಕ್ಕೆ ನೆರವಾಗುವ ಸದುದ್ದೇಶದಿಂದ ಸರ್ಕಾರ ಈ ಪ್ರಯೋಜನವನ್ನು ನೀಡುತ್ತಿದೆ. ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಭರಿಸಲಾಗುತ್ತದೆ. ಆದರೆ ಕೆಲ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಶುಲ್ಕ ವಸೂಲಿ ಮಾಡುವುದರ ಜೊತೆಗೆ, ಟ್ರಸ್ಟ್‌ನಿಂದಲೂ ಹಣ ಪಡೆದುಕೊಂಡಿವೆ.

ಈ ಕುರಿತು ದೂರುಗಳು ಬಂದಾಗ, ತಕ್ಷಣ ಕ್ರಮ ವಹಿಸಿದ ಸಚಿವ ಡಾ.ಕೆ.ಸುಧಾಕರ್‌, ಪರಿಶೀಲನೆ ನಡೆಸಿ ನೋಟಿಸ್‌ ಜಾರಿ ಮಾಡುವಂತೆ ಸೂಚನೆ ನೀಡಿದ್ದರು. ಅದರಂತೆ, ಈವರೆಗೆ 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಒಟ್ಟು 18.87 ಕೋಟಿ ರೂ. ಹಣವನ್ನು ಖಾಸಗಿ ಆಸ್ಪತ್ರೆಗಳು ಹೆಚ್ಚುವರಿಯಾಗಿ ಪಡೆದಿರುವುದು ತಿಳಿದುಬಂದಿದೆ. ಈ ಪೈಕಿ ಈಗಾಗಲೇ 1.58 ಕೋಟಿ ರೂ. ಹಣವನ್ನು ರೋಗಿಗಳ ಕುಟುಂಬಕ್ಕೆ ಹಿಂದಿರುಗಿಸಲಾಗಿದೆ. ಕೆಲ ಪ್ರಕರಣಗಳಲ್ಲಿ ಹೆಚ್ಚಿನ ಪರಿಶೀಲನೆಗಾಗಿ ದೂರುಗಳನ್ನು ಜಿಲ್ಲಾ ಮಟ್ಟದ ಕುಂದು ಕೊರತೆ ಸಮಿತಿಗೆ ವರ್ಗಾಯಿಸಲಾಗಿದೆ.

ಕೋವಿಡ್‌ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗಿದೆ. ಮೊದಲನೇ ಅಲೆಯಲ್ಲಿ, 2020 ರ ಮಾರ್ಚ್‌ನಿಂದ 2021 ರ ಮಾರ್ಚ್‌ವರೆಗೆ 391.26 ಕೋಟಿ ರೂ., ಎರಡನೇ ಅಲೆಯಲ್ಲಿ, 2021ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 376.76 ಕೋಟಿ ರೂ. ಹಾಗೂ ಮೂರನೇ ಅಲೆಯ ವೇಳೆ, 2022 ರ ಜನವರಿಯಿಂದ ಮಾರ್ಚ್‌ವರೆಗೆ 11.80 ಕೋಟಿ ರೂ. ಪಾವತಿಸಲಾಗಿದೆ.

ಈ ಕುರಿತು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್‌, ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರದಿಂದ ಹಣ ಪಡೆಯುವುದರ ಜೊತೆಗೆ ಕೋವಿಡ್‌ ರೋಗಿಗಳಿಂದಲೂ ಶುಲ್ಕ ವಸೂಲಿ ಮಾಡಿದ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಈವರೆಗೆ 1.58 ಕೋಟಿ ರೂ.ನಷ್ಟು ಹಣವನ್ನು ರೋಗಿಗಳ ಕುಟುಂಬಕ್ಕೆ ಹಿಂದಿರುಗಿಸಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಇದು, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ನೀಡಿರುವ ಸ್ಪಷ್ಟ ಎಚ್ಚರಿಕೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES