Wednesday, January 22, 2025

ಡೊಳ್ಳು ಟ್ರೈಲರ್ ಅಬ್ಬರ.. ದೇಸಿ ಜಾನಪದ ಕಲೆ ದರ್ಬಾರ್

ಮರೆಯಾಗ್ತಿರೋ ಹಳ್ಳಿ ಸೊಗಡಿನ ಜಾನಪದ ಕಲೆ ಡೊಳ್ಳು. ಈ ಟೈಟಲ್​ ಮೇಲೆ ಸಿನಿಮಾ ತಯಾರಾಗಿದ್ದು ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿದೆ. ರಿಲೀಸ್​ಗೂ ಮುನ್ನವೇ ನ್ಯಾಷನಲ್​ ಅವಾರ್ಡ್​ಗಳಿಂದ ಅಬ್ಬರಿಸ್ತಾ ಇರೋ ಸಿನಿಮಾ ಇದು. ಡೊಳ್ಳು ಕುಣಿತದ ಹಳ್ಳಿ ಕಥೆ ಹೇಳಲು ಹೊರಟಿದೆ ಚಿತ್ರತಂಡ. ಇದೀಗ ಈ ಚಿತ್ರದ ಟ್ರೈಲರ್ ರಿಲೀಸ್​ ಆಗಿದ್ದು ಮತ್ತೊಂದು ದಾಖಲೆ ಬರೆಯೋ ಸಾಧ್ಯತೆ ಎದ್ದು ಕಾಣ್ತಿದೆ.

  • ಹಳ್ಳಿಯ ಕಂಪಿನೊಳಗೆ ಮಾಯಾನಗರಿಯ ಶೋಕಗೀತೆ..!

ಜಾನಪದ ಕಲೆಗಳು ಹಳ್ಳಿಗಾಡಿನ ತಾಯಿ ಬೇರುಗಳಿದ್ದಂತೆ. ಹಳ್ಳಿಯ ಆಚರಣೆ, ಸಂಪ್ರದಾಯ, ಧಾರ್ಮಿಕ ಪದ್ಧತಿಗಳು ಅವರ ಜೀವನದ ಬಹುಮುಖ್ಯ ಭಾಗವಾಗಿ ಬೆಸೆದುಕೊಂಡಿವೆ. ಯಕ್ಷಗಾನ, ಭೂತಕೋಲ, ಕಂಸಾಳೆ, ಜಗ್ಗಲಿಗೆ, ಚಂಡೇ ಇವೆಲ್ಲಾ ಪ್ರಾಚೀನ ಕಾಲದಿಂದಲೂ ಜನರ ಜೀವನಾಡಿಯಾಗಿ, ಉಸಿರಿಗೆ ಉಸಿರಾಗಿ ಬೆರೆತು ಹೋಗಿವೆ. ಈ ಸಾಲಿನಲ್ಲಿ ಇಂದಿಗೂ ಹಳ್ಳಿಯ ಜನರ ಜತೆ ನಂಟು ಹೊಂದಿರುವ ಕಲೆ ಡೊಳ್ಳು.  ಇದೀಗ ಡೊಳ್ಳಿನ ಮೇಲೆ ಸಿನಿಮಾವೊಂದು ಬರ್ತಿದೆ.

ಡೊಳ್ಳು ಸಿನಿಮಾ ರಿಲೀಸ್​ಗೂ ಮುನ್ನವೇ ವಿಶ್ವ ಮಟ್ಟದಲ್ಲಿ ಸದ್ದು ಮಾಡಿರೋ ಸೂಪರ್​ ಸಿನಿಮಾ. ಈ ಸುಂದರ ಕಥೆಗೆ ನ್ಯಾಷನಲ್​ ಲೆವೆಲ್​ನಲ್ಲಿ ಅವಾರ್ಡ್​​ಗಳು ಬೆನ್ನು ಹತ್ತಿ ಬಂದಿವೆ. 20 ಕ್ಕೂ ಅಧಿಕ ಪ್ರಶಸ್ತಿಗಳನ್ನುಬಾಚಿಕೊಂಡಿರೋ ಡೊಳ್ಳು ಸಿನಿಮಾ ಆಗಸ್ಟ್​ 26ಕ್ಕೆ ರಿಲೀಸ್​ ಆಗ್ತಿದೆ. ಇದೀಗ ಈ ಸಿನಿಮಾದ ಟ್ರೈಲರ್​​ ಸಖತ್​ ಇಂಪ್ರೆಸ್ಸಿವ್ ಆಗಿದ್ದು, ಹಳ್ಳಿಯಿಂದ ಸಿಲಿಕಾನ್​ ಸಿಟಿಗೆ ತಲುಪೋ ಕಲಾವಿದರ ರೋಚಕ ಕಹಾನಿ ಹೇಳ ಹೊರಟಿದೆ.

  • ಜಾನಪದ ಕಲೆ ಉಳಿಸೋ ಸುಂದರ ದೃಶ್ಯ ಕಾವ್ಯ..!
  • ಗಂಡು ಕಲೆ ಡೊಳ್ಳು ಕುಣಿತ ಸಂಸ್ಕೃತಿಯ ಸೊಬಗು

ಜನಪದ ಕಲೆಗಳಲ್ಲಿ ಗಂಡು ಕಲೆ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮಾತ್ರ ಮೀಸಲಾದ ಕಲೆ. ಮೈಕಟ್ಟಿನ ಕಟ್ಟು ಮಸ್ತಾದ ಪರುಷರು ಶಿವಪ್ಪನ ಒಲಿಸಿಕೊಳ್ಳಲು ಇರುವ ಸರಳ ಭಕ್ತಿ ಮಾರ್ಗ ಡೊಳ್ಳು. ಇಂದಿಗೂ ಕರ್ನಾಟಕದ  ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಯಲ್ಲಿ ಜನಪ್ರಿಯವಾಗಿರುವ ಕಲೆ ಇದು. ಆರುಂಡಿ, ಕೆಂಚಿಕೊಪ್ಪ ಗ್ರಾಮಗಳು ಸೇರಿ ಹರಿಹರದ ಸುತ್ತಾಮುತ್ತಾ ಇಂದಿಗೂ ಆಚರಣೆಯಲ್ಲಿರುವ ಶಾಸ್ತ್ರೀಯ ಕಲೆ ಡೊಳ್ಳು.

ದುಡ್ಡಿಗೆ ಮಾರಿಕೊಳ್ಳುವ ಕಲೆಯಲ್ಲ ಇದು. ಡೊಳ್ಳು ದೇವರ ಸೇವೆ ಇದು. ಈ ಸಿನಿಮಾದಲ್ಲಿ ಹಳ್ಳಿಯಲ್ಲಿ ನಡೆಯೋ ಸುಂದರ ಪ್ರೇಮಕಥೆ ಇದೆ. ಡೊಳ್ಳು ನೆಚ್ಚಿಕೊಂಡವರ ಯುವಕರ ರೋಚಕ ಕಥೆ ಇದೆ. ಹಳ್ಳಿ ಬಿಟ್ಟು ಮಾಯಾನಗರಿಗೆ ಬಂದವರ ಕಥೆ, ವ್ಯಥೆ ಇದೆ. ಕಲೆಯನ್ನು ಇಂದೂ, ಮುಂದೂ ಉಳಿಸಿಕೊಂಡು ಹೋಗಬೇಕು ಎನ್ನುವ ಛಲದ ದಾರಿ ಇದೆ. ಅಂತೂ ಟ್ರೈಲರ್​ ಎಲ್ಲರ ಹೃದಯ ಗೆದ್ದಿದ್ದು ತೆರೆಯ ಮೇಲೆ ಕಮಾಲ್​ ಮಾಡೋದು ಪಕ್ಕಾ ಆಗಿದೆ.

ಚಿತ್ರದಲ್ಲಿ ಕಾರ್ತಿಕ್​ ಮಹೇಶ್​​, ನಿಧಿ ಹೆಗಡೆ, ಬಾಬು ಹಿರಣ್ಣಯ್ಯ ಸೇರಿ ಅನೇಕ ಕಲಾವಿದರ ಅಭಿನಯ ಎಲ್ಲರ ಮನ ಕಲಕಲಿದೆಯಂತೆ. ಗೂಗ್ಲಿ, ರಣವಿಕ್ರಮ, ನಟ ಸಾರ್ವಭೌಮದಂತಹ ಹಿಟ್ ಚಿತ್ರಗಳಿಗೆ ಆ್ಯಕ್ಷನ್ ಕಟ್​ ಹೇಳಿರುವ ಜನಪ್ರಿಯ ನಿರ್ದೇಶಕ ಪವನ್​ ಒಡೆಯರ್ ಹಾಗೂ ಅವ್ರ ಪತ್ನಿ ಅಪೇಕ್ಷಾ ಪುರೋಹಿತ್​​​ ಡೊಳ್ಳು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕಮರ್ಷಿಯಲ್​ ಸಿನಿಮಾ ಬಿಟ್ಟು ಕಂಟೆಂಟ್​ ಹಾಗೂ ಕಲಾತ್ಮಕ ಚಿತ್ರಕ್ಕೆ ಕೈ ಹಾಕಿರೋದು ಶ್ಲಾಘನೀಯ. ಸುನೀಲ್​ ಪುರಾಣಿಕ್​​ ಅವ್ರ ಮಗ ಸಾಗರ್​ ಪುರಾಣಿಕ್​​ ಚೊಚ್ಚಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ. ಅಭಿಲಾಶ್​ ಕಲಾಥಿ ಕ್ಯಾಮೆರಾ ಕಣ್ಣಲ್ಲಿ ಹಳ್ಳಿಯ ಸುಂದರ ಪರಿಸರ ಸೊಗಸಾಗಿ ಸೆರೆಯಾಗಿದೆ. ಅಂತೂ ಆಗಸ್ಟ್​​ 26ಕ್ಕೆ ಡೊಳ್ಳು ಸದ್ದು ಗದ್ದಲದ ಅಬ್ಬರ ಜೋರಾಗಿರಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES