ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮಡಿಕೇರಿಯಲ್ಲಿ ಮೊಟ್ಟೆ ಎಸೆದಿರುವುದು ನಿನ್ನೆಯಷ್ಟೇ ಅಲ್ಲ, ಇಂದೂ ಸಹ ಚಿಕ್ಕಮಗಳೂರಿನಲ್ಲಿ ದಾಳಿಗೆ ಯತ್ನಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಆರೋಪಿಸಿದೆ.
ವಿರೋಧ ಪಕ್ಷರ ಮೇಲೆ ದಾಳಿ ನಡೆಯುತ್ತಿದ್ದರು ರಾಜ್ಯ ಸರ್ಕಾರ ಏಕೆ ಎಚ್ಚೆತ್ತುಕೊಳ್ಳಲಿಲ್ಲ. ರಕ್ಷಣಾ ಕ್ರಮವನ್ನು ಏಕೆ ಬಿಗಿಗೊಳಿಸಲಿಲ್ಲ. ಮುಂದಾಗುವ ಸರ್ಕಾರ ಅನಾಹುತಗಳು ಸಂಭವಿಸಲಿ ಎಂದು ಬಯಸುತ್ತಿದೆಯೇ ಎಂದಿದೆ. ಕೊಡಗಿನಲ್ಲಾದ ಘಟನೆಯನ್ನು ಚಿಕ್ಕಮಗಳೂರಿನಲ್ಲೂ ಜರುಗಲು ಬಿಟ್ಟಿದ್ದೇಕೆ ಗೃಹಸಚಿವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಜನರ ಕಷ್ಟವನ್ನು ತಾವೂ ಕೇಳುವುದಿಲ್ಲ, ಬೆರೆಯವರೂ ಕೇಳಬಾರದು ಎಂಬ ಧೋರಣೆ ರಾಜ್ಯ ಸರ್ಕಾರದ್ದಾಗಿದೆ. ಅತಿವೃಷ್ಟಿಗೆ ಕೈಗೊಂಡ ಕ್ರಮಗಳೇನು, ನೀಡಿದ ಪರಿಹಾರವೇನು. ಉತ್ತರಿಸುವ ಧೈರ್ಯ ಸರ್ಕಾರಕ್ಕೆ ಇದೇಯಾ. ಇದುವರೆಗೂ ನಷ್ಟದ ಸರ್ವೆ ನಡೆಸದೆ, ಪರಿಹಾರ ಘೋಷಿಸದೆ ಕುರ್ಚಿ ಕಸರತ್ತಿನಲ್ಲಿ ಮುಳುಗಿದ ಸರ್ಕಾರ ಈಗ ವಿಪಕ್ಷಗಳನ್ನು ತಡೆಯುತ್ತಿದೆ.
ಬಿಜೆಪಿ ಗೂಂಡಾಪಡೆಯನ್ನು ಪೋಷಿಸುತ್ತಿದೆ ಎಂದು ಹರಿಹಾಯ್ದಿದೆ.
ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದದ್ದನ್ನು ತಾವು ಎಂಜಾಯ್ ಮಾಡುತ್ತಿರಬಹುದು. ಆದರೆ, ಅದೇ ಗೂಂಡಾಪಡೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಅವರ ಕಾರ್ ಉರುಳಿಸಲು ಹೊರಟಿತ್ತು. ಮುಂದಿನ ಸರದಿ ನಿಮ್ಮದಿರಬಹುದು. ಹಾವಿಗೆ ಹಾಲೆರೆಯುತ್ತಿದ್ದೀರಿ, ಅದು ವಿಷವಲ್ಲದೆ ಅಮೃತ ಕಕ್ಕುವುದಿಲ್ಲ ನೆನಪಿರಲಿ ಎಂದಿದೆ.