ಬೆಂಗಳೂರು : ಬಿಬಿಎಂಪಿ ಚುನಾವಣೆ ನಡೆಸೋಕೆ ಸುಪ್ರೀಂಕೋರ್ಟ್ ಸೂಚಿಸಿದ ಬೆನ್ನಲ್ಲೇ ಸರ್ಕಾರ ವಾರ್ಡ್ ವಿಂಗಡಣೆ ಮಾಡಿ ಮುಗಿಸಿದೆ. ಒಂದು ಕಡೆ ಮೀಸಲಾತಿ ವರ್ಗೀಕರಣವನ್ನು ಮಾಡಿ ಪ್ರಕಟಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯದ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಬಿಜೆಪಿ, ಆರ್ ಎಸ್ ಎಸ್ ಕಚೇರಿಯಲ್ಲೇ ಕುಳಿತು ಅವೈಜ್ಙಾನಿಕವಾಗಿ ವಾರ್ಡ್ ವಿಂಗಡಣೆ ಮಾಡಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಸಲ್ಲಿಕೆಯಾದ್ರೂ ಮೂಲೆಗೆಸೆದಿದ್ದಾರೆ. ಮೀಸಲಾತಿ ವರ್ಗೀಕರಣದಲ್ಲೂ ಅವೈಜ್ಙಾನಿಕ ಪದ್ಧತಿ ಅನುಸರಿಸಿದ್ದಾರೆ. ಕಾಂಗ್ರೆಸ್ ಪ್ರಬಲ ಪೈಪೋಟಿಗೆ ಹೆದರಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯೋಕೆ ಹೊರಟಿದ್ದಾರೆ ಅಂತ ಆರೋಪಿಸಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದೆ.
ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ರು. ಸರ್ಕಾರದ ವಿರುದ್ಧ ನಾಯಕರು ಆಕ್ರೋಶವನ್ನು ವ್ಯಕ್ತಪಡಿಸಿದ್ರು. ಇದೊಂದು ಮರ್ಡರ್ ಸರ್ಕಾರ. ಹತ್ಯೆ ಮಾಡಿಸುವುದೇ ಇವರ ಕೆಲಸ. ವಾಮಮಾರ್ಗದಲ್ಲಿ ಅಧಿಕಾರ ಹಿಡಿಯೋಕೆ ಇಂತಹ ಎಲ್ಲಾ ಕೃತ್ಯಗಳನ್ನು ಮಾಡಿಸ್ತಿದ್ದಾರೆ. ನೇರವಾಗಿ ರಾಜಕಾರಣ ಮಾಡೋಕೆ ಇವರಿಗೆ ಧಮ್ ಇಲ್ಲ ಅಂತ ಸರ್ಕಾರದ ವಿರುದ್ಧ ಮಾಜಿ ಸಚಿವ ಕೃಷ್ಣಬೈರೇಗೌಡ ಆಕ್ರೋಶ ಹೊರ ಹಾಕಿದ್ರು.
ಇನ್ನು ಪ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ ಕೈ ನಾಯಕರು ಹಾಗೂ ಕಾರ್ಯಕರ್ತರು ಸಿಎಂ ಸರ್ಕಾರಿ ನಿವಾಸಕ್ಕೆ ಮುತ್ತಿಗೆಗೆ ಪ್ರಯತ್ನಿಸಿದ್ರು. ಫ್ರೀಡಂಪಾರ್ಕ್ ನಿಂದ ರೇಸ್ ಕೋರ್ಸ್ ರಸ್ತೆಯ ಸಿಎಂ ನಿವಾಸದ ಕಡೆ ಹೆಜ್ಜೆ ಹಾಕಿದ್ರು. ಈ ವೇಳೆ ಅರ್ಧದಲ್ಲೇ ತಡೆದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ್ರು.
ಒಟ್ನಲ್ಲಿ ಬಿಬಿಎಂಪಿ ಚುನಾವಣೆ ನಡೆಸೋಕೆ ಸರ್ಕಾರಕ್ಕೆ ಇಷ್ಟವಿಲ್ಲ. ಹಾಗಾಗಿ ಸಬೂಬು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿತ್ತು. ಆದ್ರೆ, ಸುಪ್ರೀಂಕೋರ್ಟ್ ಚುನಾವಣೆ ನಡೆಸುವಂತೆ ತಾಕೀತು ಮಾಡಿದೆ. ಅನಿವಾರ್ಯವಾಗಿ ಚುನಾವಣೆ ನಡೆಸಬೇಕಿದೆ. ನಡೆಸಿದ್ರೆ ಸೋಲಿನ ಭೀತಿ. ಹೀಗಾಗಿ ವಾರ್ಡ್ ವಿಂಗಡಣೆ ,ಮೀಸಲಾತಿ ವರ್ಗೀಕರಣಕ್ಕೆ ಕೈ ಹಾಕಿ ಪ್ರತಿಪಕ್ಷ ಕಾಂಗ್ರೆಸ್ ಟೀಕೆಗೆ ಗುರಿಯಾಗಿದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು