ಬೆಂಗಳೂರು : ಕಳೆದೊಂದು ತಿಂಗಳಿನಿಂದ ಸಿಲಿಕಾನ್ ಸಿಟಿಯಲ್ಲಿ ಸುರಿದ ಮಳೆಗೆ ರಸ್ತೆಗಳೆಲ್ಲವೂ ಬಹುತೇಕ ಗುಂಡಿಮಯವಾಗಿವೆ. ಮಳೆ ನಿಂತ ಮೇಲೆ ಗುಂಡಿಗಳನ್ನು ಬಿಬಿಎಂಪಿ ಮುಚ್ಚುತ್ತೀವಿ ಅಂತ ಭರವಸೆ ನೀಡುತ್ತೆ. ಆದ್ರೆ, ನುಡಿದಂತೆ ನಡೆದುಕೊಂಡಿಲ್ಲ. ಬೆಂಗಳೂರಿನ ಪ್ರಮುಖ ರಸ್ತೆಗಳು ಗುಂಡಿಗಳಿಂದ ಕೂಡಿ, ವಾಹನ ಸವಾರರ ಸಂಚಾರಕ್ಕೆ ತೊಂದರೆ ಆಗ್ತಿದೆ ಅಂತ ಹೈಕೋಟ್೯ ಕೂಡ ಕಳೆದ ವಾರ ಕಿಡಿ ಕಾರಿತ್ತು. ಎಷ್ಟೇ ಬಾರಿ ಚಾಟಿ ಬೀಸಿದ್ರು. ದಪ್ಪ ಚರ್ಮದ ಬಿಬಿಎಂಪಿಗೆ ಅದ್ಯಾವುದೂ ಲೆಕ್ಕಕ್ಕೇ ಇಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ಬೇರೇನೋ ಹೇಳ್ತಾರೆ. ಅಯ್ಯೋ ಮಳೆ ಬರ್ತಿದೆ ಹೇಗೆ ಗುಂಡಿ ಮುಚ್ಚೋದು ಅಂತ ಸಬೂಬು ಹೇಳ್ತಿದ್ದಾರೆ.
ಕೆಂಪೇಗೌಡ ರಸ್ತೆ, ವಿಲ್ಸನ್ ಗಾರ್ಡನ್ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ ಸೇರಿ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ರಸ್ತೆ ಯಾವುದು, ಗುಂಡಿ ಯಾವುದು ಅನ್ನೋ ಹಾಗಾಗಿದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರನ್ನು ಗುಂಡಿನಗರಿ ಎಂದೂ ಅಪಹಾಸ್ಯ ಮಾಡಿಕೊಂಡು ನಗುವುದುಂಟು. ಇದಕ್ಕೆ ನೇರಹೊಣೆ ಬಿಬಿಎಂಪಿ ಎನ್ನೋದ್ರಲ್ಲಿ ಡೌಟೇ ಇಲ್ಲ. ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಗಾಗಿ ವರ್ಷಕ್ಕೆ ಬಜೆಟ್ನಲ್ಲಿ ಕಾಯ್ದಿರಿಸುವ ಮೊತ್ತವೇ ಅದೆಷ್ಟೋ ಸಾವಿರ ಕೋಟಿ. ಆದ್ರೆ, ಅದರ ನಿರ್ವಹಣೆ ವಿಷಯದಲ್ಲಿ ಮಾತ್ರ ಸಂಪೂರ್ಣ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ರಸ್ತೆ ಗುಂಡಿಗಳ ಅವ್ಯವಸ್ಥೆ ಬಗ್ಗೆ ಬಿಎಂಪಿ ಚೀಪ್ ಇಂಜಿನಿಯರ್ ಪ್ರಹ್ಲಾದ್ ಅವರನ್ನು ಕೇಳಿದ್ರೆ, ನಾವು ಈ ಬಾರಿ ಹೊಸ ಟೆಕ್ನಾಲಜಿ ಬಳಸ್ತಿದೀವಿ. ನಗರದಲ್ಲಿ ಗುಂಡಿಗಳು ಹೆಚ್ಚಾಗಿರೋದು ನಮಗೂ ಗೊತ್ತಾಗಿದೆ ಅಂತಿದ್ದಾರೆ.
ಒಟ್ಟಾರೆ ಹಲವು ಬಾರಿ ಹೈಕೋರ್ಟ್ ಪಾಲಿಕೆಗೆ ಛೀಮಾರಿ ಹಾಕಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಬಲಿಗಾಗಿ ಬಾಯ್ತೆರೆದು ಕುಳಿತ ಗುಂಡಿಗಳಿಗೆ ಮುಕ್ತಿಯೇ ಇಲ್ಲದಂತಾಗಿದೆ. ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಪರದಾಡುವಂತಾಗಿದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು