ಬಾಗಲಕೋಟೆ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ವಿಚಾರವಾಗಿ ಬರುವ ಅಗಸ್ಟ್ 22 ರ ಒಳಗಾಗಿ ಮೀಸಲಾತಿ ಕೊಡದಿದ್ದರೆ ಅ. 23 ರಿಂದ ಸಿಎಂ ಮನೆಮುಂದೆ ಹೋರಾಟ ನಡೆಸಲಾಗುವುದು ಎಂದು ಅಖಿಲ ಭಾರತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪ್ರತಿಭಟ ಮಾಡುತ್ತಿರುವ ವೇಳೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು 2ಎ ಮೀಸಲಾತಿ ಮಾಡುತ್ತೇವೆ ಎಂದು ಒಪ್ಪಿದ್ದರು. ಈಗ ತಮ್ಮ ಮಾತನ್ನು ಉಳಿಸಿಕೊಳ್ಳಿ ಎಂದರು. ತಾವು ಹೇಳಿದಂತೆ ಅ. 22ಕ್ಕೆ ಮೀಸಲಾತಿ ಘೋಷಣೆ ಮಾಡಿದ್ರೆ ನಾವು ಬಂದು ಸನ್ಮಾನ ಮಾಡ್ತೇವೆ. ಇಲ್ಲದಿದ್ದರೆ ತಮ್ಮ ಮನೆ ಮುಂದೇನೆ ಹೋರಾಟ, ಧರಣಿ ಸತ್ಯಾಗ್ರಹ ಪ್ರಾರಂಭ ಮಾಡ್ತಿವಿ ಎಂದರು.
ಈ ಬಗ್ಗೆ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಹಕ್ಕೊತ್ತಾಯ ಮಾಡಿದ್ದೇವೆ. ಅನ್ಯ ಸಮಾಜದವರು ಕೆಲವು ಜನ ನಮ್ಮನ್ನ ವಿರೋಧಿಸಿದ್ದಾರೆ. ಅವರಿಗೆ ನಾನು ವಿನಂತಿ ಮಾಡಿಕೊಳ್ತೇನೆ. ಇದು ನಮ್ಮ ಸಂವಿಧಾನ ಬದ್ಧವಾದ ಬೇಡಿಕೆ. ದಯವಿಟ್ಟು ಯಾವ ಸಮಾಜ ಕೂಡ ಅನ್ಯತಾ ಭಾವಿಸಬೇಡಿ. ನಿಮ್ಮ ಸಮಾಜದ ಮೀಸಲಾತಿ ಕಿತ್ತುಕೊಳ್ಳಬೇಕು ಅನ್ನೋದು ನಮ್ಮ ಉದ್ದೇಶ ಅಲ್ಲ. ನಮ್ಮ ಮಕ್ಕಳಿಗೂ ಕೂಡ ಮೀಸಲಾತಿ ಬೇಕು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ತಿಳಿಸಿದರು.
ಪಂಚಮಸಾಲಿ ಸಮುದಾಯ ಮಕ್ಕಳೂ ಕೂಡ ಉದ್ಯೋಗ ಶಿಕ್ಷಣಕ್ಕಾಗಿ ಬಹಳ ಕಷ್ಟ ಪಡ್ತಿದ್ದಾರೆ. ಆ ಕಾರಣಕ್ಕೆ ಮೀಸಲಾತಿ ಕೇಳ್ತಿದ್ದೆವೆ. ಕೆಲವು ಸಮಾಜಗಳು ಬೇಡ ಅನ್ನೋ ವಿರೋಧ ವ್ಯಕ್ತಪಡಿಸಿದ್ದಾರೆ. ಅವರಿಗೆ ನಾವು ವಿರೋಧ ಮಾಡೋದಿಲ್ಲ. ನಮ್ಮ ಪೀಠ ಅಥವಾ ಪೂಜ್ಯ ರಿಂದ ವಿರೋಧ ಇಲ್ಲ. ನೀವು ಕೂಡ ನಮ್ಮ ಬೇಡಿಕೆಗೆ ವಿರೋಧ ವ್ಯಕ್ತಪಡಿಸಬೇಡಿ. ನಿಮ್ಮ ಸಮಾಜದ ಸಂದರ್ಭ ಬಂದಾಗ ನಾವು ನಿಮ್ಮ ಜೊತೆ ಇರ್ತೀವಿ. ನಾವು ಮೀಸಲಾತಿ ಕೇಳುವ ಸಂಧರ್ಭದಲ್ಲಿ ತಾವು ಬೆಂಬಲ ಕೊಡಬೇಕು. ಸಿಎಂ ಮೀಸಲಾತಿ ಕೊಡಬೇಕು ಎಂದು ಕಾಶಪ್ಪನವರ್ ಆಗ್ರಹಿಸಿದರು.