Monday, December 23, 2024

ಸರ್ಕಾರದ ಇಮೇಜ್‌ಗೆ ಮಾಧುಸ್ವಾಮಿ ಆಡಿಯೋ ಕಪ್ಪುಚುಕ್ಕೆ

ಬೆಂಗಳೂರು : ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. 150 ಸೀಟ್ ಗೆದ್ದೇ ಗೆಲ್ಲುತ್ತೇವೆ ಎನ್ನುತ್ತಿದ್ದ ರಾಜ್ಯ ಬಿಜೆಪಿಗೆ ಒಂದಲ್ಲಾ ಒಂದು ಶಾಕ್ ಎದುರಾಗ್ತಿದೆ. ಆಪರೇಷನ್ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ಪಡೆ, ಆಡಳಿತ ನಡೆಸುವಲ್ಲಿ ಆಪರೇಷನ್ ಫೇಲ್ ಆಗುತ್ತಿದೆ. ನಾನಾ ಕಾರಣಗಳಿಂದ ಕಳೆದ ಎರಡು ಮೂರು ತಿಂಗಳಿನಿಂದ ಸರ್ಕಾರದ ಇಮೇಜ್ ಕಡಿಮೆಯಾಗ್ತಿದೆ. ಭ್ರಷ್ಟಾಚಾರ ಆರೋಪಗಳ ಜೊತೆ ಸಂಪುಟ ಸಚಿವರನ್ನ ವಿಶ್ವಾಸಕ್ಕೆ ತೆಗದುಕೊಳ್ಳೋದೇ ಬೊಮ್ಮಾಯಿಗೆ ದೊಡ್ಡ ತಲೆ ನೋವಾಗಿದೆ.

ಇದೀಗ ಸರ್ಕಾರ ವಿರುದ್ಧ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿರುವ ಆಡಿಯೋ, ಮತ್ತಷ್ಟು ಮುಜುಗರ ತರಸಿದೆ. ಅದ್ರಲ್ಲೂ ಸಚಿವರ ನಡುವಿನ ಕೋಲ್ಡ್ ವಾರ್ ಕೂಡ ಇರಸು ಮುರುಸು ತರಿಸಿದೆ. ಇತ್ತ ಸರ್ಕಾರದ ಕಾರ್ಯವೈಖರಿಯನ್ನ ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್, ಬೊಮ್ಮಾಯಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದೆ.

ಇನ್ನು ಸಚಿವ ಮಾಧುಸ್ವಾಮಿ ಆಡಿಯೋ, ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು ಎಂಬ ಸಚಿವ ಶ್ರೀರಾಮುಲು ಹೇಳಿಕೆ, ಸ್ಟ್ರಾಂಗ್ ಹೋಮ್ ಮಿನಿಸ್ಟರ್ ಬೇಕು ಎಂಬ ಯತ್ನಾಳ್ ಹೇಳಿಕೆ, ಸಿಎಂ ಬದಲಾವಣೆ ಆಗ್ತಾರೆ ಎಂಬ ಮಾಜಿ ಶಾಸಕ ಸುರೇಶ್ ಗೌಡ ಹೇಳಿಕೆ ಸೇರಿದಂತೆ ಅನೇಕ ನಾಯಕರ ಬಹಿರಂಗ ಹೇಳಿಕೆಗಳೇ ಸರ್ಕಾರಕ್ಕೆ ಮುಳುವಾಗುತ್ತಿದೆ. ಬಿಜೆಪಿ ನಾಯಕರ ಈ ಹೇಳಿಕೆಗಳೇ ಕಾಂಗ್ರೆಸ್ ಪಡೆಗೆ ಅಸ್ತ್ರವಾಗಿದೆ. ಚುನಾವಣಾ ವರ್ಷದಲ್ಲಿ ಬಿಜೆಪಿ ಪಕ್ಷದಲ್ಲಿ ಸ್ಫೋಟವಾಗಿರುವ ಆಂತರಿಕ ಅಸಮಧಾನವನ್ನೇ ಪ್ರಬಲ‌ ಅಸ್ತ್ರವಾಗಿ ತೆಗದುಕೊಂಡು ಪ್ರಚಾರ ಮಾಡಲು ಮುಂದಾಗಿದೆ‌. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಇಷ್ಟೊಂದು ಅಸಮಾಧಾನದಿಂದ ಸರ್ಕಾರ ನಡೆಸಲು ಸಾಧ್ಯವಾಗಿಲ್ಲವಾದ್ರೆ, ಸರ್ಕಾರ ವಿರ್ಸಜಸಿ ಚುನಾವಣೆಗೆ ಬನ್ನಿ ಎಂದು ಸವಾಲು ಹಾಕಿದೆ.

ಇನ್ನು ೨೦೧೮ರ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ್ರು ವಿರುದ್ಧ ಕೆಲವೊಂದು ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿತ್ತು. ಹೀಗಾಗಿ, ಈ ಬಾರಿ ಎಚ್ಚರಿಕೆ ಹೆಜ್ಜೆ ಇಡಲು ಪ್ಲ್ಯಾನ್‌ ಮಾಡಿರುವ ಕೈ ಪಡೆ, ಅಹಿಂದ ಮತಗಳ‌ ಜೊತೆ ಪ್ರಬಲ ಜಾತಿಗಳಾದ ಒಕ್ಕಲಿಗ ಹಾಗು ಲಿಂಗಾಯತ ಸಮುದಾಯದ ಮತಗಳನ್ನ ಕ್ರೋಡಿಕರಣ ಮಾಡುವ ನಿಟ್ಟಿನಲ್ಲಿ ರೂಪರೇಷೆ ರೆಡಿ ಮಾಡುತ್ತಿದೆ.
ಒಟ್ಟಾರೆ,ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಹೆಚ್ಚಾಗುತ್ತಿದೆ‌. ಇದನ್ನ ಲಾಭ ಮಾಡಿಕೊಳ್ಳಲು ಮುಂದಾಗಿರುವ ಪ್ರತಿಪಕ್ಷ ಕಾಂಗ್ರೆಸ್, ನಾನಾ ಕಾರ್ಯಕ್ರಮಗಳನ್ನ ಮಾಡುವ ಮೂಲಕ ಮತದಾರರ ಮನಸ್ಸು ಗೆಲ್ಲಲು ಮುಂದಾಗಿದೆ. ಇದು ಎಷ್ಟರಮಟ್ಟಿಗೆ ವರ್ಕ್ ಔಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಗೋವಿಂದ್, ಪೊಲಿಟಿಕಲ್ ಬ್ಯುರೋ,ಪವರ್ ಟಿವಿ

RELATED ARTICLES

Related Articles

TRENDING ARTICLES