ಕಾರವಾರ : ಮಳೆ ನಿಂತರು ಮಳೆ ಹನಿ ನಿಂತಿಲ್ಲ ಅನ್ನೋ ಹಾಗೆ ಪ್ರವಾಹ ತಣ್ಣಗಾಗಿದ್ದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿಯುವ ಆತಂಕ ದೂರವಾಗಿಲ್ಲ. ಮಹಾ ಮಳೆಗೆ ಜುಲೈ 1ರಂದು ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತ ಉಂಟಾಗಿ ಮನೆ ಕುಸಿದು ಬಿದ್ದು ನಾಲ್ವರು ಮೃತಪಟ್ಟಿದ್ದರು.
ಇದೀಗ ಹೊನ್ನಾವರ ತಾಲೂಕಿನ ಅಪ್ಸರ್ ಕೊಂಡದಲ್ಲಿ ಗುಡ್ಡ ಬಿರುಕು ಬಿಟ್ಟಿದ್ದು ಕುಸಿಯುವ ಆತಂಕದಿಂದ ಆ ಭಾಗದ 69 ಕುಟುಂಬಗಳನ್ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಜೊಯೀಡಾ ತಾಲೂಕಿನ ಅಣಶಿ ಘಾಟ, ಜಾಜಿಗುಡ್ಡ,ಯಲ್ಲಾಪುರ ತಾಲೂಕಿನ ಅರಬೈಲ್ ಭಾಗಗಳಿಗೆ ಕೇಂದ್ರ ಜಿಯೋಲಾಜಿಕಲ್ ಹಾಗೂ ಭೂ ವಿಜ್ಞಾನಗಳ ತಂಡ ಭೇಟಿ ನೀಡಿ ಸರ್ವೆ ನಡೆಸಿದ್ದು ಜಿಲ್ಲಾಡಳಿತಕ್ಕೆ ಶೀಘ್ರದಲ್ಲಿ ವರದಿ ನೀಡಲಿದೆ.
ಇನ್ನೂ ಕಳೆದ ವರ್ಷಕೂಡ ಭೂ ಕುಸಿತವಾಗಿದ್ದ ಕಡೆಯಲ್ಲಿ ಕೇಂದ್ರ ಜಿಯೋಲಾಜಿಕಲ್ ಸರ್ವೆ ತಂಡ ಭೂ ವಿಜ್ಞಾನಿಗಳ ತಂಡ ಸರ್ವೆ ನಡೆಸಿ ಜಿಲ್ಲೆಯ ಐದು ಸ್ಥಳಗಳಲ್ಲಿ ಕುಸಿತವಾಗುವ ಬಗ್ಗೆ ಈ ಹಿಂದೆಯೇ ವರದಿ ನೀಡಿತ್ತು, ಈ ವರ್ಷ ಕೂಡ ಮತ್ತೆ ಭೂ ಕುಸಿತವಾಗಿರುವ ಹಿನ್ನಲೆಯಲ್ಲಿ ಸರಕಾರದ ಶಿಫಾರಸ್ಸಿನ ಮೇಲೆ ಶಿರಸಿ ತಾಲೂಕಿನ ಜಾಜಿಗುಡ್ಡ,ಹೊನ್ನಾವರದ ಅಪ್ಸರ್ ಕೊಂಡ, ಕುಮಟ ತಾಲೂಕಿನ ತಂಡ್ರಕುಳಿ,ಭಟ್ಕಳದ ಮುಟ್ಟಳ್ಳಿ ಭಾಗದಲ್ಲಿ ಸರ್ವೆ ಕಾರ್ಯ ಮಾಡಿದ್ದು, ಮಣ್ಣಿನ ಸಾಂದ್ರತೆಯ ಪರೀಕ್ಷೆ ನಡೆಸಿದ್ದಾರೆ. ಮತ್ತೆ ಭೂ ಕುಸಿಯವಾಗುವ ಆತಂಕ ಮನೆ ಮಾಡಿದ್ದು, ಜಿಲ್ಲಾಡಳಿಕ್ಕೆ ಆ ಭಾಗದಲ್ಲಿನ ಜನರ ಸುರಕ್ಷತ ಸ್ಥಳಗಳಿಗೆ ಸ್ಥಳಾಂತರ ಮಾಡುವಂತೆ ಮಾಹಿತಿ ನೀಡಿದೆ.