ಭಟ್ರು ಕಥೆ ಮುಗೀತು. ಭಟ್ರ ತಲೇಲಿ ಇನ್ನೇನೂ ಇಲ್ಲ. ಗಾಳಿಪಟ ಸೋತ್ರೆ ಗಾಳಿಪಟದಂತೆ ಮಾಯವಾಗಿಬಿಡ್ತಾರೆ ಭಟ್ರು. ಹೀಗೆ ಯೋಗರಾಜ್ ಭಟ್ರನ್ನ ಆಡಿಕೊಳ್ಳದವ್ರೇ ಇಲ್ಲ. ಆದ್ರೀಗ ಗಾಳಿಪಟ-2ನಿಂದ ಎಲ್ಲರ ಬಾಯಿ ಮುಚ್ಚಿಸಿದ್ದಾರೆ ವಿಕಟಕವಿ. ಮ್ಯಾಟರ್ ಅದಲ್ಲ, ಗೋಲ್ಡನ್ ಸ್ಟಾರ್ ಗಣಪನನ್ನೇ ಬಿಟ್ಟು ಗಾಳಿಪಟ ಸೀಕ್ವೆಲ್ ಮಾಡೋಖೆ ಹೊರಟಿದ್ದರಂತೆ ಭಟ್ರು. ಓ ಮೈ ಗಾಡ್..! ಇದು ನಿಜಾನಾ ಅನ್ನೋರಿಗೆ ಉತ್ತರ ಇಲ್ಲಿದೆ.
- ಶರಣ್, ರಿಷಿ, ಪವನ್ ಕಾಂಬೋನಲ್ಲಿ ಆ್ಯಕ್ಷನ್ ಕಟ್ಗೆ ಸಿದ್ಧತೆ
- ಪಂಚತಂತ್ರ ಸೋಲಿಂದ ಮರಾಠಿ ಪ್ರೊಡ್ಯೂಸರ್ ಹಿಂದೇಟು
- ಫೀನಿಕ್ಸ್ನಂತೆ ಮೈಕೊಡವಿ ಎದ್ದು ಬಂದ ಭಟ್ರ ಅಸಲಿ ಕಥೆ..!
ಅವಮಾನ ಹಾಗೂ ಅಪಮಾನಗಳು ಮನುಷ್ಯನನ್ನ ಮತ್ತಷ್ಟು ಸದೃಢಗೊಳಿಸುತ್ತೆ ಅನ್ನೋದು ಅಕ್ಷರಶಃ ಸತ್ಯ ಅನಿಸುತ್ತೆ. ಸಾಲು ಸಾಲು ಸಿನಿಮಾಗಳಿಂದ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದ್ದ ಯೋಗರಾಜ್ ಭಟ್ರು, ಸಿನಿಮಾದ ಬಗ್ಗೆ ಗಾಳಿ ಗಂಧ ಗೊತ್ತಿಲ್ಲದವ್ರ ಬಳಿ ಕೂಡ ಚಿಕ್ಕವರಾಗಿಬಿಟ್ಟಿದ್ರು. ಆದ್ರೆ ಅವ್ರ ಸಿನಿಮೋತ್ಸಾಹ ಎಂದೂ ಕುಗ್ಗಿರಲಿಲ್ಲ. ಪ್ರಯತ್ನಗಳು ನಿಂತಿರಲಿಲ್ಲ. ಅದರ ಪ್ರತಿಫಲವೇ ಗಾಳಿಪಟ-2 ಬಿಗ್ಗೆಸ್ಟ್ ಸಕ್ಸಸ್.
ಯೆಸ್.. ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ಅನಂತ್ನಾಗ್ ಕಾಂಬಿನೇಷನ್ನಲ್ಲಿ ತೆರೆಕಂಡ ಈ ಸಿನಿಮಾ ಸದ್ಯ ನೋಡುಗರಿಗೆ ಮಸ್ತ್ ಮನರಂಜನೆ ನೀಡ್ತಿದೆ. ಭಟ್ರ ಜಮಾನ ಮುಗೀತು ಅಂದುಕೊಳ್ತಿದ್ದವ್ರಿಗೆ ತಮ್ಮ ಸಾಹಿತ್ಯದ ಮಜಲುಗಳನ್ನ ಸವಿಯೋ ಹಾಗೆ ಮಾಡಿದ್ದಾರೆ ಭಟ್ರು. ತರ್ಲೆ, ತುಂಟತನ, ಹಾಸ್ಯಕ್ಕೆ ಭಾವನೆಗಳ ಲೇಪನ ಮಾಡಿ ಕಜಕಿಸ್ತಾನ್, ಕಾಶ್ಮೀರ್ನ ಸುಂದರ ತಾಣಗಳಲ್ಲಿ ದೃಶ್ಯಕಾವ್ಯ ಅರಳಿಸಿದ್ದಾರೆ.
ಮೂರೇ ದಿನಕ್ಕೆ 50 ಕೋಟಿ ಕ್ಲಬ್ ಸೇರಿದೆ ಅಂತ ಅಂದಾಜಿಸಲಾಗ್ತಿದ್ದ ಗಾಳಿಪಟ-2 ಬಾಕ್ಸ್ ಆಫೀಸ್ ಲೆಕ್ಕಾಚಾರಗಳ ನಡುವೆ, ಭಟ್ರ ಇನ್ಸೈಡ್ ಸ್ಟೋರಿ ಒಂದು ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ ಅವ್ರು ಇಲ್ಲದೇನೇ, ಗಾಳಿಪಟ ಸೀಕ್ವೆಲ್ ಮಾಡೋಕೆ ಮುಂದಾಗಿದ್ರಂತೆ ಭಟ್ರು. ಹೌದು.. ಪಂಚತಂತ್ರ ಸಿನಿಮಾದ ಶೂಟಿಂಗ್ ವೇಳೆ ಮರಾಠಿ ಪ್ರೊಡ್ಯೂಸರ್ ಜೊತೆಗೂಡಿ ಗಾಳಿಪಟ 2 ಮಾಡೋಕೆ ಮುಹೂರ್ತ ಇಟ್ಟಿದ್ರಂತೆ.
ಆಗ ಭಟ್ರ ಲೆಕ್ಕಾಚಾರದ ಪ್ರಕಾರ ಅದ್ರ ಹೀರೋಗಳು ಶರಣ್, ರಿಷಿ ಹಾಗೂ ಪವನ್ ಕುಮಾರ್. ಅವ್ರು ಗಣಿಯನ್ನ ಬಿಟ್ಟು ಸಿನಿಮಾ ಮಾಡೋ ಮನಸ್ಸು ಯಾಕೆ ಮಾಡಿದ್ರೋ ಗೊತ್ತಿಲ್ಲ. ಪರಿಸ್ಥಿತಿ ಹಾಗೂ ಮನಸ್ಥಿತಿಗೆ ಅನುಗುಣವಾಗಿ ಭಟ್ರು ದಾರ ಹಿಡಿದು, ಪಟವನ್ನು ಹಾರಿಸೋಕೆ ಸೂತ್ರ ರೂಪಿಸಿದ್ರು. ಆದ್ರೆ ಯಾವಾಗ ಪಂಚತಂತ್ರ ಮೂವಿ ಫ್ಲಾಪ್ ಆಯ್ತೋ, ಆಗ ಭಟ್ರ ಗಾಳಿಪಟ ಕನಸಿಗೆ ನೀರೆರೆಯಲು ಮರಾಠಿ ನಿರ್ಮಾಪಕರು ಹಿಂದೇಟು ಹಾಕಿದ್ರಂತೆ.
ಹಾಗಾಗಿಯೇ ತದನಂತ್ರ ಗಾಳಿಪಟ- 2ಗೆ ರಮೇಶ್ ರೆಡ್ಡಿ ಹಣ ಹೂಡಲು ಮುಂದಾದ್ರು. ಬಳಿಕ ಶರಣ್, ರಿಷಿಯನ್ನ ಕೈಬಿಟ್ಟು ಗಣೇಶ್- ದಿಗಂತ್ರನ್ನೇ ಭಟ್ರು ರೀಟೈನ್ ಮಾಡಿಕೊಂಡು ಹುಷಾರಾಗಿಬಿಟ್ರು. ಇದೀಗ ಸಿನಿಮಾ ಸಕ್ಸಸ್ ಆಗಿದೆ. ರಿಲೀಸ್ ಆದ ಬಹುತೇಕ ಎಲ್ಲಾ ಥಿಯೇಟರ್ಗಳಲ್ಲೂ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ಒಳ್ಳೆಯ ಮನಸ್ಸಿನಿಂದ ಒಳ್ಳೆಯ ಸಿನಿಮಾ ಮಾಡಿದ್ರೆ ಕನ್ನಡಿಗರು ಕೈಹಿಡಿಯುತ್ತಾರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ