Sunday, January 19, 2025

ಗ್ರಾಮ ಒನ್’ಗೆ ಇನ್ನಷ್ಟು ಸೇವೆ ಸೇರ್ಪಡೆ: ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ

ಬೆಂಗಳೂರು: ಗ್ರಾಮ ಪಂಚಾಯತ್ ವ್ಯಾಪ್ತಿ ಮಟ್ಟದಲ್ಲಿಯೇ ನಾಗರಿಕ ಸೇವೆಗಳನ್ನು ಒದಗಿಸಲು ಪ್ರಾರಂಭಿಸಲಾಗಿರುವ ಗ್ರಾಮ ಒನ್ ಕೇಂದ್ರಗಳನ್ನು ಬಲಪಡಿಸಲು ಇನ್ನಷ್ಟು ಸೇವೆಗಳನ್ನು ಸೇರ್ಪಡೆಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದ್ದಾರೆ.

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಇ-ಆಡಳಿತ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಗ್ರಾಮ ಒನ್ ಕೇಂದ್ರಗಳ ಮೂಲಕ ಒದಗಿಸಬಹುದಾದ ಸೇವೆಗಳನ್ನು ಗುರುತಿಸಿ, ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧ ಜಿಲ್ಲೆಗಳಿಗೆ ವಿಶಿಷ್ಟವಾದ ಸೇವೆಗಳನ್ನು ಆಯಾ ಜಿಲ್ಲೆಗಳಿಗೆ ಸೀಮಿತಗೊಳಿಸಿ ಗ್ರಾಮ ಒನ್ ಕೇಂದ್ರಗಳಲ್ಲಿ ಒದಗಿಸಬೇಕು. ಜೊತೆಗೆ ಮೈಕ್ರೋ ಬ್ಯಾಂಕಿಂಗ್, ಎಲ್​.ಪಿ.ಜಿ ಬುಕಿಂಗ್ ಮತ್ತೀತರ ಕೆಲವು ಸೇವೆಗಳನ್ನು ಒದಗಿಸಲು ಅವಕಾಶ ಕಲ್ಪಿಸಬಹುದು ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈವರೆಗೆ ಒಟ್ಟು 7274 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, 2022ರ ಜನವರಿಯಲ್ಲಿ 65,520 ವ್ಯವಹಾರ ನಡೆದಿದ್ದು, ಜೂನ್ ತಿಂಗಳಲ್ಲಿ 10,36,542 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಟಲ್ ಜನಸ್ನೇಹಿ ಕೇಂದ್ರಗಳ ಸೇವೆಯನ್ನು ಗ್ರಾಮ ಒನ್ ಮೂಲಕವೂ ಒದಗಿಸುವ ಬಗ್ಗೆ ಪ್ರಾಯೋಗಿಕವಾಗಿ ಕೆಲವು ಕೇಂದ್ರಗಳಲ್ಲಿ ಪ್ರಾರಂಭಿಸಲು ಮುಖ್ಯಮಂತ್ರಿಗಳು ಸೂಚಿಸಿದರು.

RELATED ARTICLES

Related Articles

TRENDING ARTICLES