ಚಾಮರಾಜನಗರ : ಕಳೆದ ಹತ್ತು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಚಾಮರಾಜನಗರದ ರಂಗಮಂದಿರ ಇದೀಗ ಲೋಕಾರ್ಪಣೆಯಾಗುವ ಮೂಲಕ ಜಿಲ್ಲೆಯ ಕಲಾವಿದರ ಹಲವು ವರ್ಷದ ಬೇಡಿಕೆ ಈಡೇರಿದಂತ್ತಾಗಿದೆ.
ವರನಟ, ಚಾಮರಾಜನಗರದ ಮಗ ಡಾ. ರಾಜ್ ಕುಮಾರ್ ಅವರಿಗೆ ಇದೀಗ ಜಿಲ್ಲಾಡಳಿತ ಗೌರವ ಸಮರ್ಪಿಸಿತು. ಚಾಮರಾಜನಗರ ಜಿಲ್ಲೆಯಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಳೆದ ಒಂದು ದಶಕದಿಂದ ಕುಂಟುತ್ತಾ ಸಾಗುತ್ತಿದ್ದ ರಂಗಮಂದಿರ ಕಾಮಗಾರಿಯನ್ನು ಚುರುಕುಗೊಳಿಸಿ ಸಚಿವ ವಿ.ಸೋಮಣ್ಣ ಲೋಕಾರ್ಪಣೆಗೊಳಿಸಿದ್ದಾರೆ. ಜೊತೆಗೆ, ರಂಗಮಂದಿರಕ್ಕೆ ವರನಟ ಡಾ.ರಾಜ್ ಕುಮಾರ್ ಎಂದು ಹೆಸರು ಸಹ ಇಡಲಾಗಿದೆ.
ಜನಪದೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಸಿರಿವಂತವಾಗಿರುವ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ರಂಗಮಂದಿರ ಬೇಕು ಎನ್ನುವುದು ಹಲವು ಕಲಾವಿದರು ಹಾಗೂ ರಂಗಾಸಕ್ತರ ಕೂಗಾಗಿತ್ತು. ಕಲಾವಿದರ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ 2009–10ನೇ ಸಾಲಿನಲ್ಲಿ ರಂಗಮಂದಿರ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು.
ಜಿಲ್ಲಾಡಳಿತ ಭವನದ ಸಮೀಪ ಒಂದು ಎಕರೆ 20 ಗುಂಟೆ ಪ್ರದೇಶದಲ್ಲಿ ಸುಮಾರು 3.5 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಈಗ ರಂಗಮಂದಿರ ಲೋಕಾರ್ಪಣೆಗೊಂಡಿದೆ.