ವಂದೇ ಮಾತರಂ ಗೀತೆಯಿಂದ ಭಾವೈಕ್ಯತೆಯ ಸಂದೇಶ ಸಾರೋ ಮಹಾನ್ ಕಾರ್ಯಕ್ಕೆ ಚಂದನವನದ ತಾರೆಯರೆಲ್ಲಾ ಕೈ ಜೋಡಿಸಿದ್ದಾರೆ. ಇಡೀ ಚಿತ್ರರಂಗವನ್ನು ಒಂದು ಹಾಡಿನಲ್ಲಿ ನೋಡೋಕೆ ಎರಡು ಕಣ್ಣು ಸಾಲದು. ಇಷ್ಟಕ್ಕೂ ಹಾಡು ಹೇಗಿದೆ..? ಅದ್ರ ಹಿಂದಿನ ಮಾಸ್ಟರ್ಮೈಂಡ್ ಯಾರು..? ಯಾರೆಲ್ಲಾ ಸ್ಟಾರ್ಸ್ ಇದ್ದಾರೆ ಹಾಗಾದರೆ ಈ ಸ್ಟೋರಿ ಓದಿ.
- ಕ್ರೇಜಿ- ಜಗ್ಗೇಶ್- ರಮೇಶ್ ಅರವಿಂದ್ಗೆ ಸಂತು ಆ್ಯಕ್ಷನ್ ಕಟ್
- ಶಿವಣ್ಣ ಜೊತೆ ಅನಂತ್ನಾಗ್, ಗಣೇಶ್, ಅರ್ಜುನ್ ಸರ್ಜಾ
- ಧ್ರುವ, ಡಾಲಿ, ಮುರಳಿಗೆ ತಿಮ್ಮಕ್ಕ, ಕ್ರಿಕೆಟರ್ ವೆಂಕಿ ಸಾಥ್..!
ಭಾರತಕ್ಕೆ ಸ್ವತಂತ್ರ ಬಂದು 75 ವರ್ಷಗಳು ಕಳೆಯಿತು. ಅಮೃತ ಮಹೋತ್ಸವ ಸಂಭ್ರಮದಲ್ಲಿರೋ ಭಾರತೀಯರಾದ ನಮಗೆ ನಿಜಕ್ಕೂ ಇದೊಂಥರಾ ನಿತ್ಯ, ನೂತನ, ಅವಿಸ್ಮರಣೀಯ ಪಯಣ. ಹೌದು.. ಜಾತಿ, ಧರ್ಮ, ಮತ, ಭಾಷೆ, ಗಡಿ ಎಲ್ಲವನ್ನೂ ಮೀರಿದ ಬಾಂಧವ್ಯ. ಈ ಭಾವೈಕ್ಯತೆಯನ್ನ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ವಿವಿಧತೆಯಲ್ಲಿ ಏಕತೆಯಿದೆ. ಒಗ್ಗಟ್ಟಿನಲ್ಲಿ ಬಲವಿದೆ. ಹಾಗಾಗಿಯೇ ಬರೋಬ್ಬರಿ 75 ವರ್ಷದ ಪ್ರಜಾಪ್ರಭುತ್ವಕ್ಕೆ ಸಾಕ್ಷಿ ಆಗಿದೆ.
ಇಡೀ ದೇಶಾದ್ಯಂತ ತ್ರಿವರ್ಣ ಧ್ವಜ ಹಾರಿಸೋ ಮುಖೇನ, ನಾವು ಭಾರತೀಯರೆಲ್ಲರೂ ಒಂದೇ. ನಮ್ಮ ಸಂಸ್ಕೃತಿ, ಪರಂಪರೆ ಎಂಥದ್ದು..? ಸ್ವಾತಂತ್ರ್ಯಕ್ಕಾಗಿ ಮಡಿದ ವೀರ ಸೇನಾನಿಗಳಾರು..? ಶಾಂತಿಯಿಂದ ದೇಶ ಕಟ್ಟಲು ಮುಂದಾದವರು, ಕ್ರಾಂತಿಯ ಪಥ ಹಿಡಿದವ್ರು, ಹೀಗೆ ಎಲ್ಲರನ್ನ ಸ್ಮರಿಸೋ ವಿಶೇಷ ದಿನವಿದು. ಇಂತಹ ಅಮೃತ ಮಹೋತ್ಸವ ಗಳಿಗೆಯಲ್ಲಿ ವಂದೇ ಮಾತರಂ ಸಂದೇಶವನ್ನ ನಮ್ಮ ಸ್ಯಾಂಡಲ್ವುಡ್ ತಾರೆಯರು ಸಹ ಸಾರಿದ್ದಾರೆ. ಅದು ನಿಜಕ್ಕೂ ಅದ್ಭುತ, ಅಮೋಘ ಹಾಗೂ ಅದ್ವಿತೀಯ ಅನಿಸಲಿದೆ.
ರಾಜಕುಮಾರ ಹಾಗೂ ಯುವರತ್ನ ಚಿತ್ರಗಳ ನಿರ್ದೇಶಕ ಸಂತೋಷ್ ಆನಂದ್ರಾಮ್ ನಿರ್ದೇಶನದಲ್ಲಿ ಮೂಡಿಬಂದಿರೋ ಈ ವಂದೇ ಮಾತರಂ ಹಾಡಿಗೆ ವಿಜಯ್ ಪ್ರಕಾಶ್ ಗಾಯನವಿದೆ. ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ನಟ, ರಾಜಕಾರಣಿ ನವರಸನಾಯಕ ಜಗ್ಗೇಶ್ ಅವ್ರೇ ಈ ಹಾಡನ್ನ ನಿರ್ಮಿಸೋ ಸಾಹಸಕ್ಕೆ ಕೈ ಹಾಕಿರೋದು ವಿಶೇಷ. ಪ್ರವೀಣ್ ಡಿ ರಾವ್ ಸಂಗೀತವಿರೋ ಈ ಹಾಡಿಗೆ ಶ್ರೀಶ ಕುದುವಳ್ಳಿ ಸಿನಿಮಾಟೋಗ್ರಫಿ, ದೀಪು ಎಸ್ ಕುಮಾರ್ ಸಂಕಲನವಿದೆ.
ಮುಖ್ಯ ಭೂಮಿಕೆಯಲ್ಲಿ ಜಗ್ಗೇಶ್, ರಮೇಶ್ ಅರವಿಂದ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್, ಅರ್ಜುನ್ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್, ರೋರಿಂಗ್ ಸ್ಟಾರ್ ಶ್ರೀಮುರಳಿ, ಧ್ರುವ ಸರ್ಜಾ, ಡಾಲಿ, ರಿಷನ್ ಶೆಟ್ಟಿ ಹೀಗೆ ಸಾಕಷ್ಟು ಜನ ತಾರೆಯರು ಅದ್ರ ಅಂದ ಚೆಂದ ಹೆಚ್ಚಿಸಿದ್ದಾರೆ. ಅದ್ರಲ್ಲೂ ಎವರ್ಗ್ರೀನ್ ಹೀರೋ ಅನಂತ್ನಾಗ್ರಿಂದ ಹಾಡಿನ ತೂಕ ಹೆಚ್ಚಿದೆ.
ಬರೀ ಸಿನಿ ತಾರೆಯರಷ್ಟೇ ಅಲ್ಲದೆ, ಜೋಗತಿ ಮಂಜಮ್ಮ, ಸಾಲು ಮರದ ತಿಮ್ಮಕ್ಕ, ಕ್ರಿಕೆಟರ್ ವೆಂಕಟೇಶ್ ಪ್ರಸಾದ್, ಸಾಹಿತಿ ಎಸ್ಎಲ್ ಭೈರಪ್ಪರಂತಹಯ ಮಹನೀಯರು ಕೂಡ ಇದಕ್ಕೆ ಸಾಥ್ ನೀಡಿದ್ದು, ಹಾಡಿನ ಗಮ್ಮತ್ತು ಹೆಚ್ಚಿದೆ. ಒಟ್ಟಾರೆ ವಂದೇ ಮಾತರಂ ಅನ್ನೋದು ಬರೀ ಬಾಯಿ ಮಾತಿಗಷ್ಟೇ ಅಲ್ಲದೆ, ಮನಸ್ಸಿನಿಂದ ಎಲ್ಲರೂ ಹೇಳುವಂತಾಗಬೇಕು. ಸರ್ವಧರ್ಮಗಳ ಸಮನ್ವಯತೆಯ ಜೊತೆ ನಮ್ಮ ಹಿಂದೂಸ್ತಾನದ ಸಂಸ್ಕೃತಿಯನ್ನ ಎತ್ತಿ ಹಿಡಿಯುವಂತಾಗಬೇಕು. ದೇಶಪ್ರೇಮ ಎಲ್ಲರಲ್ಲೂ ಉಕ್ಕಿ ಹರಿಯಬೇಕು. ನಮ್ಮ ದೇಶ ನಮ್ಮ ಹೆಮ್ಮೆ ಅನ್ನೋ ಭಾವ ಮೂಡಬೇಕು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ