Sunday, November 24, 2024

ವೀರಪ್ಪನ್ ಮಿಣ್ಯಂ ದಾಳಿಗೆ ಇಂದಿಗೆ 30 ವರ್ಷ

ವೀರಪ್ಪನ್ ಎಂದರೆ ಸಾಕು ಯಾರಿಗೆ ಗೊತ್ತಿಲ್ಲ ಹೇಳಿ, ಒಂದು ಕಾಲದಲ್ಲಿ ವೀರಪ್ಪನ್ ಅಂದರೆ ಎಲ್ಲರೂ ಬೆಚ್ಚಿ ಬೀಳುತ್ತಿದ್ದರು. ಆ ಕಾಲದಲ್ಲಿ ವೀರಪ್ಪನ್ ಹಿಡಿದೇ ತೀರುತ್ತೇವೆ ಎಂದು ಶಪಥ ಮಾಡಿ ಕಾಡುಗಳ್ಳನ ಹುಟ್ಟಡಗಿಸಲು ತೆರಳಿದ್ದ ಎಸ್ಪಿ ಸೇರಿದಂತೆ 6 ಮಂದಿ ಪೊಲೀಸರು ಹುತಾತ್ಮರಾದ ಚಾಮರಾಜನಗರ ಜಿಲ್ಲೆ ಮಿಣ್ಯಂ ದಾಳಿ ನಡೆದು ಇಂದಿಗೆ ಬರೋಬ್ಬರಿ 3 ದಶಕವಾಗಿದೆ.

ಕಾಡುಗಳ್ಳ ನರಹಂತಕ ವೀರಪ್ಪನ್​ನ ರಕ್ತಸಿಕ್ತ ಅಧ್ಯಾಯದಲ್ಲಿ ಒಂದಾದ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ರಾಮಾಪುರ ಠಾಣಾ ವ್ಯಾಪ್ತಿಯ ಮಿಣ್ಯಂ ಎಂಬ ಸ್ಥಳದಲ್ಲಿ ಅಡಗಿ ಏಕಾಏಕಿ ನಡುರಸ್ತೆಯಲ್ಲಿ ನರಹಂತಕ ಗುಂಡಿನ ಮಳೆಗೈದಿದ್ದ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಯ ಮುನ್ನ ಪೊಲೀಸರಿಗೆ ಈ ಮರಣದ ಕಥೆ ಈಗಲೂ ಕಣ್ಣೀರು ತರಿಸುತ್ತಿದೆ.

ದಂತಚೋರ ಎಲ್ಲೆ ಮೀರಿದ್ದ 90ರ ದಶಕದಲ್ಲಿ ಎಸ್​ಟಿಎಫ್​​ನಲ್ಲಿ ಕರ್ತವ್ಯ ಮಾಡಲು ಹಿಂಜರಿಯುವಂತಹ ಪರಿಸ್ಥಿತಿ ಇತ್ತು. ಆ ವೇಳೆ ಆತನನ್ನು ಹಿಡಿದೇ ಹಿಡಿಯುತ್ತೇವೆ ಎಂದು ಸಾಹಸತನ ತೋರಿದ್ದ ಎಸ್​​​ಪಿ ಹರಿಕೃಷ್ಣ ಹಾಗೂ ಎಸ್ಐ ಶಕೀಲ್ ಅಹ್ಮದ್, ವೀರಪ್ಪನ್​ ಮೋಸಕ್ಕೆ ಬಲಿಯಾಗಿದ್ದರು. ಆ ದಿನವನ್ನ ಅವತ್ತು ಎಸ್​​ಟಿಎಫ್​​ನಲ್ಲಿದ್ದ ಹಲವು ಪೊಲೀಸರು ಈಗಲೂ ನೆನೆಯುತ್ತಾರೆ.

ಎಸ್​ಟಿಎಫ್ ಪಡೆಯ ನಿರಂತರ ಕಾರ್ಯಾಚರಣೆ ವೇಳೆ ವೀರಪ್ಪನ್ ಬಂಟನಾದ ಗುರುನಾಥನ್ ಎಂಬಾತನನ್ನು ಹಿಡಿಯುವ ಅವಕಾಶ ಒದಗಿ ಬಂದಿತ್ತು. ಆದರೆ ಆತ ಕೊನೆಗೆ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ತನ್ನ ನೆಚ್ಚಿನ ಬಂಟನನ್ನು ಕಳೆದುಕೊಂಡಿದ್ದ ವೀರಪ್ಪನ್ ಹರಿಕೃಷ್ಣ ಮತ್ತು ಶಕೀಲ್ ಅಹ್ಮದ್​​​​​ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ.

ಹಠಕ್ಕೆ ಬಿದ್ದಿದ್ದ ವೀರಪ್ಪನ್​, ಕಮಲ ನಾಯ್ಕ ಎಂಬುವವನ ಮೂಲಕ ದಾಳಿ ನಡೆಸಲು ಯೋಜನೆ ರೂಪಿಸುತ್ತಾನೆ. ಕಮಲ ನಾಯ್ಕ ವೀರಪ್ಪನ್ ಮತ್ತು ಪೊಲೀಸರಿಗೆ ಮಾಹಿತಿದಾರನಂತೆ ಕೆಲಸ ಮಾಡುತ್ತಾನೆ. ವ್ಯಾಪಾರಿಗಳ ಸೋಗಿನಲ್ಲಿ ಕಾಡುಗಳ್ಳನನ್ನು ಹಿಡಿಯಲು ಹೊರಟ ಹರಿಕೃಷ್ಣ ಮತ್ತು ಶಕೀಲ್ ಅಹ್ಮದ್ ಅವರನ್ನು ಮೀಣ್ಯಂ ಬಳಿ ವೀರಪ್ಪನ್ ಹೊಂಚುಹಾಕಿ ಕಾದು ಗುಂಡಿನ ಮಳೆಯನ್ನೇ ಸುರಿಸಿ ಬಲಿ ಪಡೆಯುತ್ತಾನೆ. ಘಟನೆಯಲ್ಲಿ ಅಪ್ಪಚ್ಚು, ಸುಂದರ್, ಕಾಳಪ್ಪ ಸೇರಿದಂತೆ ಕಮಲನಾಯ್ಕನೂ ಮೃತಪಡುತ್ತಾನೆ. ಕೆಲ ಪೊಲೀಸರು ಗಾಯಗೊಳ್ಳುತ್ತಾರೆ.

ಆದರೆ ಮಿಣ್ಯಂ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿದ್ದರಾಜನಾಯಕ ಎಂಬ ಪೊಲೀಸ್ ಅಧಿಕಾರಿ ಕಳೆದ ವರ್ಷ ಅಸುನೀಗಿದ್ದಾರೆ. ಸಿದ್ದರಾಜನಾಯಕ ಅವರ ತಲೆ ಹಾಗೂ ಕಣ್ಣಿಗೆ ಬುಲೆಟ್ ಹೊಕ್ಕಿತ್ತು‌. ಅದನ್ನು ದೇಹದಿಂದ ತೆಗೆದರೇ ಅಪಾಯ ಎಂದು ಹಾಗೇ ಬಿಟ್ಟಿದ್ದರು‌. ತಲೆ, ಕಣ್ಣಲ್ಲಿ ಬುಲೆಟ್ ಇಟ್ಟುಕೊಂಡೇ ಸಿದ್ದರಾಜನಾಯಕ ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದರು. ಕೆಲವು ತಿಂಗಳುಗಳ ಹಿಂದೆಯಷ್ಟೇ ಕರ್ತವ್ಯ ನಿರತರಾಗಿರುವಾಗಲೇ ಪಿಎಸ್ಐ ಸಿದ್ದರಾಜನಾಯಕ ಅಸುನೀಗಿದ್ದಾರೆ. ಸಿದ್ದರಾಜನಾಯಕ ಬದುಕಿದಷ್ಟು ದಿನವೂ ಮಿಣ್ಯಂ ದಾಳಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದರು. ಶಕೀಲ್ ಅಹಮದ್ ಅದೆಷ್ಟರ ಮಟ್ಟಿಗೆ ಆತನನ್ನು ಹಿಡಿಯಲೇ ಬೇಕೆಂದು ಪಣ ತೊಟ್ಟಿದ್ದರು, ದಿನಗಟ್ಟಲೇ ಯೋಜನೆ ರೂಪಿಸುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಿದ್ದರು.

ಪೊಲೀಸರಿಗೆ ಸ್ವಾತಂತ್ರ್ಯದ ಸಂಭ್ರಮಾಚರಣೆ ಹಿಂದಿನ ದಿನ ಬರುವ ಕರಾಳ ದಿನ ಮೀಣ್ಯಂ ದಾಳಿಯಾಗಿದೆ.‌ ದಕ್ಷ, ಸಾಹಸಿ ಪೊಲೀಸ್ ಅಧಿಕಾರಿಗಳನ್ನು ಕಳೆದುಕೊಂಡ ಘಟನೆ ಇಂದಿಗೂ ಮಾಸದೇ ಕಣ್ಣೀರು ತರಿಸುತ್ತದೆ‌.

RELATED ARTICLES

Related Articles

TRENDING ARTICLES