ಶಿವಮೊಗ್ಗ : ಕಾಂಗ್ರೆಸ್ ನವರಿಗೆ ರಾಷ್ಟ್ರಧ್ವಜದ ಬಣ್ಣದ ಬಗ್ಗೆ ತಿಳಿದುಕೊಳ್ಳಲು ಒಂದು ಅಭ್ಯಾಸ ವರ್ಗ ಮಾಡುವ ಅವಶ್ಯಕತೆ ಇದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಸ್ಥಾನಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆಯಿತು. ಇಡೀ ದೇಶದ ಜನ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ತಿರಂಗಾ ಧ್ವಜ ಹಾರಿಸಲು ಜನ ಸಂತೋಷದಿಂದ ಸ್ವಾಗತ ಮಾಡಿದ್ದಾರೆ ಎಂದರು.
ನಮ್ಮ ದೇಶದ ಜನ ರಾಷ್ಟ್ರ ಭಕ್ತಿಯ ಕಡೆಗೆ ಜಾಗೃತಿ ಆಗುತ್ತಿದ್ದಾರೆ. ಮುಖ್ಯಮಂತ್ರಿ ಆಗಿದ್ದವರಿಗೆ ನಮ್ಮ ರಾಷ್ಟ್ರಧ್ವಜದ ಬಣ್ಣ ಗೊತ್ತಿಲ್ಲ. ಕೆಂಪು, ಬಿಳಿ, ಹಸಿರು ಅಂತಾ ಹೇಳುವ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗಿದೆ. ಮೊದಲು ನಮ್ಮ ರಾಷ್ಟಧ್ವಜದ ಬಣ್ಣದ ಬಗ್ಗೆ ತಿಳಿದುಕೊಳ್ಳಲಿ. ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಹೇಳಿದರು.
ಬಿಜೆಪಿಯವರು ಪಕ್ಷದ ಕಚೇರಿಯಲ್ಲಿ ಧ್ವಜ ಹಾರಿಸಲ್ಲ ಆರೋಪ ವಿಚಾರವಾಗಿ ಮಾತನಾಡಿದ ಅವರು, ಯಾವನೋ ಹೇಳ್ತಾನೆ ಅಂತಾ ಅದಕ್ಕೆ ಉತ್ತರ ಕೊಡಕಾಗುತ್ತದಾ….? ರಾಷ್ಟ್ರದ ಬಗ್ಗೆ, ರಾಷ್ಟ್ರಧ್ವಜದ ಬಗ್ಗೆ ರಾಷ್ಟ್ರ ಭಕ್ತಿ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ಇಲ್ಲ. ಕಾಂಗ್ರೆಸ್ನವರಿಂದ ರಾಷ್ಟ್ರ ಭಕ್ತಿ ಬಗ್ಗೆ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ನವರಿಗೆ ರಾಷ್ಟ್ರಧ್ವಜದ ಬಣ್ಣದ ಬಗ್ಗೆ ತಿಳಿದುಕೊಳ್ಳಲು ಒಂದು ಅಭ್ಯಾಸ ವರ್ಗ ಮಾಡುವ ಅವಶ್ಯಕತೆ ಇದೆ. ತಿರಂಗಾ ಧ್ವಜದ ಬಗ್ಗೆ ಕಾಂಗ್ರೆಸ್ ನವರಿಗೆ ತಿರಸ್ಕಾರ, ಅಜ್ಞಾನ ಇದೆ. ತ್ರಿವರ್ಣ ಧ್ವಜ, ರಾಷ್ಟ್ರ ಭಕ್ತಿ ಬಗ್ಗೆ ಈಗಿನ ಕಾಂಗ್ರೆಸ್ನವರಿಗೆ ಕಲ್ಪನೆ ಇಲ್ಲ ಎಂದರು.
ಕಾಂಗ್ರೆಸ್ ಭಾರತ್ ಜೋಡೋ ಆಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ದೇಶವನ್ನು ತುಂಡು ಮಾಡಿದವರು ನೆಹರು. ನೆಹರು ವಂಶಸ್ಥ ರಾಹುಲ್ ಗಾಂಧಿ ಭಾರತ್ ಜೋಡೋ ವಿಚಾರ ಇಟ್ಕೊಂಡು ಪಾದಯಾತ್ರೆ ಮಾಡ್ತೀವಿ ಅಂತಾರೆ. ದೇಶವನ್ನು ವಿಭಜನೆ ಮಾಡಿದವರ ಸಂತತಿ ಭಾರತ್ ಜೋಡೋ ಅಂತಾ ಹೊರಟಿರುವುದು ದುಃಖಕರ ಸಂಗತಿ. ನೆಹರು ಸಂತತಿ ಅಂದ್ರೆ ಜಿನ್ನಾ ಸಂತತಿ ಇದ್ದಾಗೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು, ಎಸಿಬಿ ರದ್ದುಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ಮುಚ್ಚಿಡಲು ಎಸಿಬಿ ಜಾರಿಗೆ ತಂದರು. ಎಸಿಬಿ ರದ್ದು ಮಾಡಿ, ಲೋಕಾಯುಕ್ತಗೆ ಶಕ್ತಿ ಕೊಡಬೇಕು ಅಂತಾ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅದನ್ನು ನಮ್ಮ ಸರ್ಕಾರ ಸ್ವಾಗತ ಮಾಡುತ್ತದೆ. ಎಸಿಬಿ ರದ್ದು ಮಾಡಿ, ಲೋಕಾಯುಕ್ತ ಮೂಲಕ ಎಷ್ಟು ಜನ ಭ್ರಷ್ಟರು ಇದ್ದಾರೋ ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದರು.