ಬೆಂಗಳೂರು : ಬಿಡಿಎ ನಿವೇಶನದಾರರೇ ಎಚ್ಚರ. ನಿಮ್ಮ ಸೈಟ್ ನಿಮ್ಮ ಹೆಸರಿನಲ್ಲೇ ಇದ್ಯಾ ಅಂತಾ ಒಮ್ಮೆ ಚೆಕ್ ಮಾಡಿಕೊಳ್ಳಿ. ಬಿಡಿಎ ಸೈಟ್ ಖಾಲಿ ಬಿಟ್ಟು ಸುಮ್ನೆ ಕೂತ್ರೆ ಭೂಗಳ್ಳರ ಪಾಲಾಗುತ್ತೆ. ಹೌದು.. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಭೂ ಮಾಫಿಯಾದ ಕಳ್ಳಾಟ ಜೋರಾಗಿದೆ. ಭೂ ಮಾಫಿಯಾ ಕೈಚಳಕಕ್ಕೆ ಬೆಚ್ಚಿಬಿದ್ದ ಬಿಡಿಎ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸೈಟ್ ಮಾರಾಟ ಮಾಡಿಬಿಟ್ಟಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ನಂಜಪ್ಪ ಎಂಬುವರಿಗೆ ಬಿಡಿಎ ನಿವೇಶನ ಹಂಚಿಕೆಯಾಗಿತ್ತು. ಸೈನಿಕನ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೃಷ್ಠಿ ಮಾಡಿ, ಬನಶಂಕರಿ 6ನೇ ಹಂತ 3ನೇ ಬ್ಲಾಕ್ ನಲ್ಲಿರುವ 717 ಸಂಖ್ಯೆ ನಿವೇಶನವನ್ನ ನಂಜೇಗೌಡ ಎಂಬುವರಿಗೆ ಮಾರಾಟ ಮಾಡಿದ್ದಾರೆ. ಖಾತೆ ವರ್ಗಾವಣೆ ವೇಳೆ ಭೂಗಳ್ಳರ ಚಾಲಾಕಿತನ ಬಯಲಾಗಿದ್ದು, ಸೈಟ್ ಖರೀದಿಸಿರುವ ನಂಜೇಗೌಡ ಹಾಗೂ ನಕಲಿ ಲೆಫ್ಟಿನೆಂಟ್ ಕರ್ನಲ್ ವಿರುದ್ದ ಬಿಡಿಎ ಜಾಗೃತ ದಳ ಎಫ್ ಐಆರ್ ದಾಖಲಿಸಿದೆ.