ಬಳ್ಳಾರಿ : ದೇಶ ರಕ್ಷಣೆಗೆಂದು ಕುಟುಂಬದಿಂದ ದೂರವಿದ್ದು ಗಡಿ ಕಾಯುವ ಸೈನಿಕರಿಗೆ ರಾಖಿ ಕಳುಹಿಸುವ ಮೂಲಕ ರಕ್ಷಾಬಂಧನವನ್ನು ಬಳ್ಳಾರಿಯ ಸಹೋದರಿಯೊಬ್ಬರು ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಭಾರತೀಯ ಯೋಧರಿಗೆ ರಾಖಿ ತಲುಪಿಸುತ್ತಿರುವ ಈ ಸಹೋದರಿ ಬಳ್ಳಾರಿಯ ಬಸವೇಶ್ವರ ನಗರ ನಿವಾಸಿ ವಿದ್ಯಾಶ್ರೀ. ಪ್ರತಿ ರಕ್ಷಾ ಬಂಧನಕ್ಕೆ ಸಹೋದರಿ ವಿದ್ಯಾಶ್ರೀ 1 ಸಾವಿರ ರಾಖಿಯನ್ನು ಯೋಧರಿಗೆ ಕಳುಹಿಸುತ್ತಾರೆ.
ರಕ್ತಸಂಬಂಧದ ಹಂಗಿಲ್ಲದೇ ಇದ್ದರೂ ಯೋಧರು ಅಣ್ಣತಮ್ಮಂದಿರೇ ಎಂಬ ಭಾವನೆಯಿಂದ ಪ್ರತಿ ವರ್ಷ 1000 ರಾಖಿಗಳನ್ನು ಕಳುಹಿಸಿ ವಿದ್ಯಾಶ್ರೀ ರವರು ರಕ್ಷಾಬಂಧನ ಹಬ್ಬ ಸಾರವಾಗಿರುವ ಭಾತೃತ್ವವನ್ನು ಸಹೋದರತ್ವವನ್ನು ಮೆರೆದಿದ್ದಾರೆ.
ಬಳ್ಳಾರಿಯಿಂದ ರಾಖಿ ತಲುಪಿದ ನಂತರ ಸೈನಿಕರು ಅದನ್ನು ಧರಿಸಿ ವಿದ್ಯಾಶ್ರೀಯ ವರೊಂದಿಗೆ ಮಾತನಾಡಿ ತಮ್ಮ ಸಂತಸವನ್ನು ಪ್ರತಿವರ್ಷ ಹಂಚಿಕೊಳ್ಳುತ್ತಾರೆ.
ಅದರಲ್ಲಿ ವಾಘಾ ಗಡಿಯಲ್ಲಿರುವ ಯೋಧರು, ಅಸ್ಸಾಂನಲ್ಲಿರುವ ಯೋಧರು ಹಾಗೂ ಬಾರ್ಡರ್ ಸೆಕ್ಯೂರಿಟಿ ಪೋರ್ಸ್ನ ಯೋಧರು ಸೇರಿದ್ದಾರೆ. ಯೋಧರ ಕ್ಷೇಮೋಭಿವೃದ್ಧಿಗಾಗಿ ಬೆಂಗಳೂರಿನ ನಿವೃತ್ತ ಯೋಧ ಜಯರಾಂ ಎನ್ನುವವರು ‘ಯೋಧ ನಮನ’ ಸಂಸ್ಥೆಯನ್ನು ನಡೆಸುತ್ತಿದ್ದು, ಅವರ ಮೂಲಕ ವಿದ್ಯಾಶ್ರೀರವರು ರಾಖಿಯನ್ನು ಸೈನಿಕರು ಕಳಿಸುತ್ತಾರೆ.
ಈ ಕುರಿತು ವಿದ್ಯಾಶ್ರೀ ಮಾತನಾಡಿ, ರಾಖಿಯನ್ನು ಪ್ರತಿ ವರ್ಷ ಕಳುಹಿಸುತ್ತೇನೆ. ಸುಮಾರು 200 ಯೋಧ ಸಹೋದರರೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ ಎಂದಿದ್ದಾರೆ.