ಬೆಂಗಳೂರು : ಈದ್ಗಾ ಮೈದಾನದ ವಿವಾದಕ್ಕೆ ಸರ್ಕಾರ ಕೊನೆಗೂ ತೆರೆ ಎಳೆದಿದೆ. ವಿವಾದಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್.ಅಶೋಕ್ ಸಭೆ ನಡೆಸಿ ಮಹತ್ವದ ನಿರ್ಧಾರ ಘೋಷಣೆ ಮಾಡಿದ್ರು.
ಇದೀಗ ಕಂದಾಯ ಇಲಾಖೆಯ ಅಧೀನಕ್ಕೆ ಈದ್ಗಾ ಮೈದಾನ ಬಂದಿದೆ. ಅದರಂತೆ ಅಲ್ಲಿ ಏನು ನಡೆಯಬೇಕು ಎಂಬುದನ್ನು ನಾವೇ ತೀರ್ಮಾನ ಮಾಡಿದ್ದೇವೆ. ಸಿಎಂ ಬೊಮ್ಮಾಯಿಯವರ ಸೂಚನೆ ಮೇರೆಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ಆಶೋಕ್ ಚಾಮರಾಜಪೇಟೆ ಮೈದಾನ ವಿವಾದಕ್ಕೆ ಸದ್ಯಕ್ಕೆ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಕೋರ್ಟ್ ಆದೇಶದಂತೆ ಕೆಲವೊಂದು ನಿರ್ಣಯ ಮಾಡಿರೋ ಸರ್ಕಾರ ಎಸಿ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವ ದಿನ ಆಚರಿಸಲು ನಿರ್ಧಾರ ಮಾಡಲಾಗಿದೆ. ಇದರಂತೆ ಆ ಕ್ಷೇತ್ರದ ಎಂಪಿ ಮತ್ತು ಎಂಎಲ್ ಎಗಳಿಗೆ ಮಾತ್ರ ವೇದಿಕೆಗೆ ಅವಕಾಶವಿದ್ದು, ಬೇರೆ ಯಾವುದೇ ಸಂಘಟನೆಗಳಿಗೆ ಅವಕಾಶವಿಲ್ಲ ಎಂದು ಅಶೋಕ್ ಹೇಳಿದ್ರು.
ಇನ್ನು ಕಂದಾಯ ಇಲಾಖೆಯ ಅಧೀನಕ್ಕೆ ಚಾಮರಾಜಪೇಟೆ ಮೈದಾನ ಬಂದಿರೋದ್ರಿಂದ ಯಾವುದೇ ಗೊಂದಲಗಳನ್ನು ಸೃಷ್ಟಿ ಮಾಡಲು ಸರ್ಕಾರ ಹೋಗಿಲ್ಲ. ಎಲ್ಲಾರೂ ಒಂದೇ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯೋ ಪ್ರಯತ್ನ ಮಾಡಿದೆ. ಹೀಗಾಗಿ ಎಂದಿನಂತೆ ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಮಾಡಲು ಮುಸ್ಲಿಮರಿಗೆ ಅವಕಾಶ ಕಲ್ಪಿಸಿದೆ. ಇದನ್ನ ಹೊರತಾಗಿ ಬೇರೆ ಯಾವುದೇ ಕಾರ್ಯಕ್ರಮಗಳು ನಡೆಯುವಂತಿಲ್ಲ.. ಜೊತೆಗೆ ಮುಂದೆ ಬರುವ ಗಣೇಶೋತ್ಸವಕ್ಕೂ ಸರ್ಕಾರ ಒಂದು ಪ್ಲ್ಯಾನ್ ರೂಪಿಸಿದ್ದು, ಅಲ್ಲೂ ಸಹ ಯಾವುದೇ ಗೊಂದಲ ಮೂಡದಂತೆ ಮಾಡಲು ತಂತ್ರ ರೂಪಿಸಿದೆ. ಇದರ ಜೊತೆಗೆ ಮೈದಾನಕ್ಕೆ ಈದ್ಗಾ ಬದಲು ಸರ್ವೇ ನಂ. 40 ಗುಟ್ಟಹಳ್ಳಿ ಅಂತ ಸದ್ಯಕ್ಕೆ ನಾಮಕರಣ ಮಾಡಿರೋದು ವಿಶೇಷವಾಗಿದೆ.
ಒಟ್ಟಿನಲ್ಲಿ ಮುಂದೆ ಬೆಂಗಳೂರಿಗೆ ಅಗಬಹುದಾದ ಅನಾಹುತವನ್ನ ತಡೆಗಟ್ಟುವ ನಿಟ್ಟಿನಿಂದ ಸರ್ಕಾರ ಮಹತ್ವದ ಅದೇಶ ಮಾಡಿದೆ. ಸರ್ಕಾರದ ಅಡಿಯಲ್ಲಿ ಎಲ್ಲಾ ಒಂದೇ ಅನ್ನೋ ಸಂದೇಶ ಸಾರಲು ಹೊರಟಿರೋದು ಉತ್ತಮ ಬೆಳವಣಿಗೆ ಎನ್ನುತ್ತಿದ್ದಾರೆ ಜನ.
ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು.