ಬೆಂಗಳೂರು: ಬೆಂಗಳೂರಿನಲ್ಲಿಂದು ಖ್ಯಾತ ಗಾಯಕ ಶಿವಮೊಗ್ಗದ ಸುಬ್ಬಣ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಕುಟುಂಬ ಸದಸ್ಯರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಂತ್ವನ ಹೇಳಿದರು.
ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಶಿವಮೊಗ್ಗ ಸುಬ್ಬಣ್ಣ ಅವರ ಅಂತ್ಯಕ್ರಿಯೆಯನ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಡಲಾಗುವುದು ಎಂದು ತಿಳಿಸಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಸುಬ್ಬಣ್ಣ ಅವರ ಪಾರ್ಥಿವ ಶರೀರವನ್ನು ಇಟ್ಟು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಸಿಎಂ ಹೇಳಿದರು.
ಶಿವಮೊಗ್ಗ ಸುಬ್ಬಣ್ಣ ಅವರು ಸಾಹಿತ್ಯ, ಸಂಗೀತ ಹಾಡುಗಾರಿಕೆಯಲ್ಲಿ ಪರಿಣಿತ ಹೊಂದಿದ್ದರು. ಹತ್ತು ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದ ಮನೆ ಮನೆಗೆ ಅವರ ಹಾಡುಗಳನ್ನು ಮುಟ್ಟಿಸಿದ್ದಾರೆ. ಇಂತಹ ಮಹಾನ್ ಕಲಾವಿದರನ್ನ ಕಳೆದುಕೊಂಡ ಕನ್ನಡ ನಾಡು ಹಾಗೂ ಕನ್ನಡ ಸಾಂಸ್ಕೃತಿಕ ಲೋಕ ಬಡವಾಗಿದೆ ಎಂದರು.