ಶಿವಮೊಗ್ಗ: ಶಿವಮೊಗ್ಗದಿಂದ ಶಿಕಾರಿಪುರ ಮಾರ್ಗವಾಗಿ ರಾಣೆಬೆನ್ನೂರು ತೆರಳುವ ಹೊಸ ರೈಲುಮಾರ್ಗಕ್ಕೆ ಟೆಂಡರ್ ಕರೆಯಲಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಿಂದ ಶಿಕಾರಿಪುರವಾಗಿ ರಾಣೆಬೆನ್ನೂರು ಮಾರ್ಗದ ಹೊಸ ರೈಲುಮಾರ್ಗಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಸುಮಾರು 535 ಕೋಟಿ ವೆಚ್ಚದ ಕಾಮಗಾರಿ ಇದು. ಸ್ವಾತಂತ್ರ್ಯದ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ರೈಲಮಾರ್ಗ ಪ್ರಾರಂಭವಾದದ್ದು ಇದೇ ಮೊದಲು ಇದು 30ಕ್ಕೂ ಹೆಚ್ಚು ಹಳ್ಳಿಗಳನ್ನು ಸಂಪರ್ಕಿಸುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ಈ ಹೊಸ ರೈಲು ಮಾರ್ಗಕ್ಕೆ ಈಗಾಗಲೇ ಸುಮಾರು 555 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ರೈತರಿಗೆ ಪರಿಹಾರ ಕೂಡ ನೀಡಲಾಗಿದೆ. ಇದಕ್ಕಾಗಿ 125 ಕೋಟಿ ರೂ. ವೆಚ್ಚ ಮಾಡಲಾಗಿದೆ. 30 ತಿಂಗಳ ಅವಧಿಯೊಳಗೆ ರೈಲುಮಾರ್ಗ ಸಿದ್ಧವಾಗಲಿದೆ ಎಂದಿದ್ದಾರೆ.
ಈ ರೈಲು ಮಲೆನಾಡು ಮತ್ತು ಬಯಲುಸೀಮೆಯನ್ನು ಸಂಪರ್ಕಿಸುವ ರೈಲು ಮಾರ್ಗವಾಗಿದ್ದು, ಸುಮಾರು 10 ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಾಗೆಯೇ ಹೊಸದಾಗಿ ರಾಷ್ಟ್ರೀಯ ಹೆದ್ದಾರಿಗಳ ಬೈಪಾಸ್‍ಗಳನ್ನು ಕೂಡ ನಿರ್ಮಿಸಲಾಗುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆದಿದೆ ಎಂದು ಬಿ.ವೈ.ಆರ್ ಹೇಳಿದ್ದಾರೆ.