ಸ್ಯಾಂಡಲ್ವುಡ್ನ ಟ್ರೆಂಡ್ ಸೆಟ್ಟರ್ ರವಿಮಾಮ, ಬೋಪಣ್ಣನ ಅವತಾರ ತಾಳಿದ್ದಾರೆ. ಆದ್ರೆ ಅಲ್ಲಿ ರೊಮ್ಯಾನ್ಸ್ಗೆ ಕಿಂಚಿತ್ತೂ ಕೊರತೆ ಇಲ್ಲ. ಟಿಪಿಕಲ್ ಕ್ರೇಜಿಸ್ಟಾರ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಎಲ್ಲರ ಕಣ್ಣು ಕುಕ್ಕುವಂತಿತ್ತು. ಕ್ರೇಜಿ ಕ್ಯಾಪ್ಟನ್ಗೆ ನವರಸನಾಯಕ ಜಗ್ಗೇಶ್, ಕಿಚ್ಚ ಸುದೀಪ್, ಡಾಲಿ, ಅಧ್ಯಕ್ಷ ಶರಣ್ ಸೇರಿದಂತೆ ಇಡೀ ಇಂಡಸ್ಟ್ರಿ ಸಾಥ್ ನೀಡಿತು. ಆ ಅವಿಸ್ಮರಣೀಯ ಕ್ಷಣಗಳ ಕಂಪ್ಲೀಟ್ ವರದಿ ನೀವೇ ಓದಿ.
- ಸಿಕ್ಕಾಪಟ್ಟೆ ಸಸ್ಪೆನ್ಸ್.. ಮಸ್ತ್ ರೊಮ್ಯಾನ್ಸ್.. ಹೈಕ್ಳು ಖುಷ್
- ಕಿಚ್ಚನ ವಾಯ್ಸ್ನಲ್ಲಿ ಕರೆಂಟ್ ಇದೆ ಎಂದ ರವಿಮಾಮ
- ಆ ಟೈಪ್.. ಈ ಟೈಪ್.. ಎಲ್ಲಾ ಟೈಪ್ ಇದೆ- ಜಗ್ಗೇಶ್..!
ಕ್ರೇಜಿಸ್ಟಾರ್ ಆ್ಯಕ್ಷನ್ ಕಟ್ ಹೇಳಿದ ಸಿನಿಮಾಗಳಲ್ಲಿ ಸಾವಿರ ಸೂಕ್ಷ್ಮ ವಿಷಯಗಳ ಸಮಾಗಮವಿರುತ್ತೆ. ಪ್ರಯೋಗಾತ್ಮಕ ಸಿನಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲೇ ಕ್ರಿಯೇಟಿವಿಟಿಗೆ ಹೆಸರಾದ ಜನಪ್ರಿಯ ನಿರ್ದೇಶಕ ರವಿಚಂದ್ರನ್. ಇದೀಗ ಆಗಸ್ಟ್ 12ಕ್ಕೆ ಕ್ರೇಜಿಸ್ಟಾರ್ ನಿರ್ದೇಶನದ ರವಿ ಬೋಪಣ್ಣ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ಹಾಗಾಗಿ ಸ್ಯಾಂಡಲ್ವುಡ್ ತಾರೆಯರ ಸಮಾಗಮದಲ್ಲಿ ಭರ್ಜರಿ ಪ್ರೀ-ರಿಲೀಸ್ ಇವೆಂಟ್ ಸಮಾರಂಭ ನಡೆಯಿತು. ಒಂದೇ ವೇದಿಕೆಯಲ್ಲಿ ಕಿಚ್ಚ ಸುದೀಪ್, ಡಾಲಿ, ಜಗ್ಗೇಶ್, ಶರಣ್ ರಂಗೇರಿಸಿದ್ರು.
ಈಗಾಗ್ಲೇ ರವಿಬೋಪಣ್ಣ ಚಿತ್ರದ ಝಲಕ್ಗಳು ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿವೆ. ಕಾವ್ಯ ಶೆಟ್ಟಿ ವೈಯ್ಯಾರಕ್ಕೆ ಪಡ್ಡೆ ಹೈಕಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ರೊಮ್ಯಾಂಟಿಕ್ ಹಾಡುಗಳು ಯುವಕರ ಎದೆಯಲ್ಲಿ ಕಿಚ್ಚು ಹೆಚ್ಚಿವೆ. ರವಿಮಾಮನಿಗೆ ಕಿಚ್ಚ ಕೂಡ ಸಾಥ್ ನೀಡಿದ್ದು, ಚಿತ್ರದಲ್ಲಿ ಕಾಣಸಿಗಲಿದ್ದಾರೆ. ಜೈ ಜಗದೀಶ್, ರಚಿತಾ ರಾಮ್, ರಮ್ಯಾಕೃಷ್ಣ, ರವಿಶಂಕರ್ ಸೇರಿದಂತೆ ಘಟಾನುಘಟಿ ಕಲಾವಿದರ ಸಮಾಗಮವಿದೆ.
ಸುದೀಪ್ರನ್ನ ಸದಾ ತನ್ನ ಹಿರಿಮಗನಂತೆ ಕಾಣೋ ರವಿಮಾಮ, ವೇದಿಕೆಯಲ್ಲಿ ಕಿಚ್ಚನ ಗುಣಗಾನ ಮಾಡಿ, ನಮ್ಮ ನಡುವೆ ಜನ್ಮ ಜನ್ಮದ ಅನುಬಂಧವಿದೆ ಎಂದ್ರು. ಸುದೀಪ್ ವಾಯ್ಸ್ನಲ್ಲಿ ಕರೆಂಟ್ ಇದೆ ಅಂತ ಅವ್ರ ಬೇಸ್ ವಾಯ್ಸ್ನ ಹೊಗಳಿದ್ರು.
ರೋಣ ವೇದಿಕೆ ಹತ್ತಿ ಬರ್ತಾ ಇದ್ದಂತೆ ಶಿಳ್ಳೆ, ಚಪ್ಪಾಳೆಯ ಸುರಿಮಳೆಯಾಯ್ತು. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ನ ಕ್ರೇಜಿಸ್ಟಾರ್ ಆಗಲೇ ತಂದಿದ್ದಾರೆ. ಕನ್ನಡ ಚಿತ್ರರಂಗದ ಆಸ್ತಿ, ಗತ್ತು, ವೈಭವ ನಮ್ ರವಿ ಸರ್ ಎಂದು ಅಣ್ಣಯ್ಯನನ್ನು ಗುಣಗಾನ ಮಾಡಿದ್ರು.
ರವಿ ಬೋಪಣ್ಣ ಸಿನಿಮಾದಲ್ಲಿ ಗ್ಲಾಮರಸ್ ಸೀನ್ಗಳು ಹೆಚ್ಚಾಗಿ ಇರೋದಕ್ಕೆ ಜಗ್ಗೇಶ್ ನಗೆ ಚಟಾಕಿ ಹಾರಿಸಿದ್ರು. ಈ ಚಿತ್ರದಲ್ಲಿ ಆ ಟೈಪ್, ಈ ಟೈಪ್, ಎಲ್ಲಾ ಟೈಪ್ ಇದೆ. ರವಿಚಂದ್ರನ್ ಯಾವ ಟೈಪ್ ಗೊತ್ತಾಗ್ಬೇಕು ಎಂದ್ರು.
- ರವಿ ಸರ್ ಫಿಲಾಸಫರ್.. ಹೆಡ್ಬುಷ್ನಲ್ಲಿ ಕ್ರೇಜಿ ಫಿಲಾಸಫಿ
- ಅಹಂ ಪ್ರೇಮಾಸ್ಮಿ ಆಡಿಷನ್ ನೆನೆದ ಸ್ಯಾಂಡಲ್ವುಡ್ ಶರಣ
ಡಾಲಿ ಧನಂಜಯ ಕೂಡ ಮಾತನಾಡಿ, ರವಿಚಂದ್ರನ್ ಸರ್ಗಿಂತ ಫಿಲಾಸಫರ್ ಬೇಕಾ ಎಂದು ಗುಣಗಾನ ಮಾಡಿದ್ರು. ಅಲ್ಲದೆ, ಹೆಡ್ಬುಷ್ ಕಥೆಯಲ್ಲಿ ರವಿ ಸರ್ ಫಿಲಾಸಫಿ ಇದೆ ಎಂದ್ರು.
ಇದ್ರ ಜತೆಗೆ ಸ್ಯಾಂಡಲ್ವುಡ್ ಅಧ್ಯಕ್ಷ ಶರಣ್ ಕೂಡ ತಮ್ಮ ಅಹಂ ಪ್ರೇಮಾಸ್ಮಿ ಚಿತ್ರದ ಆಡಿಷನ್ ಸಂದರ್ಭವನ್ನು ನೆನಪು ಮಾಡಿಕೊಂಡ್ರು. ಆ ಸಮಯದಲ್ಲಿ ರವಿ ಸರ್ ನನಗೆ ಅವಕಾಶ ಕೊಟ್ಟ ಗಳಿಗೆ ಮರೆಯೋಕೆ ಸಾಧ್ಯವೇ ಇಲ್ಲ ಅಂತ ಕನಸುಗಾರನ ಸಹಾಯ ನೆನೆದ್ರು.
ಸಿನಿಮಾ ಈಗಾಗ್ಲೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದೆ. ಬಹಳ ದಿನಗಳ ನಂತ್ರ ರವಿ ಬೋಪಣ್ಣ ಚಿತ್ರವನ್ನು ತಾವೇ ನಿರ್ದೇಶಿಸಿ, ನಿರ್ಮಿಸಿರೋ ಕ್ರೇಜಿಸ್ಟಾರ್ಗೆ, ಅವ್ರ ಅಭಿಮಾನಿಗಳು, ಸಿನಿಪ್ರಿಯರಂತೆ ಅವ್ರಿಗೂ ಭರವಸೆ ನೂರು ಪಟ್ಟು ಜಾಸ್ತಿನೇ ಇದೆ. ಒಟ್ಟಾರೆ ರವಿ ಬೋಪಣ್ಣನ ಸಸ್ಪೆನ್ಸ್ ದರ್ಬಾರ್ ಜೊತೆ ರೊಮ್ಯಾನ್ಸ್ ಯಾವ ಲೆವೆಲ್ಗಿರಲಿದೆ ಅಂತ ಇದೇ ವಾರ ಕಾದು ನೋಡಬೇಕಿದೆ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ