ಬೆಂಗಳೂರು : ಕಾರ್ಪೋರೇಟ್ ಕಂಪನಿಗಳ ಲಾಬಿಗೆ ಕೇಂದ್ರ ಸರ್ಕಾರ ಮಣಿದಿದ್ಯಾ ಅನ್ನೋ ಅನುಮಾನ ಕಾಡ್ತಾ ಇದೆ.ವಿದ್ಯುತ್ ವಿತರಣಾ ಸಂಸ್ಥೆಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಸಂಸತ್‌ನಲ್ಲಿ ವಿವಾದಿತ ಬಿಲ್, ವಿದ್ಯುತ್ ತಿದ್ದುಪಡಿ ಮಸೂದೆ 2022 ಮಂಡನೆ ಮಾಡಿರೋದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಿಲ್‌ಗೆ ಸರ್ಕಾರಿ ಸ್ವಾಮ್ಯದ ವಿದ್ಯುತ್ ವಿತರಣಾ ಕಂಪನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ವಿವಾದಿತ ಬಿಲ್ ವಿರೋಧಿಸಿ ಕೆಪಿಟಿಸಿಎಲ್ ಕೇಂದ್ರ ಕಚೇರಿ ಮುಂದೆ ನೌಕರರು ಪ್ರತಿಭಟನೆ ನಡೆಸಿದ್ರು. ಮಸೂದೆ ಮಂಡನೆ ಮೂಲಕ ಖಾಸಗೀಕರಣಗೊಳಿಸಲು ಪ್ರಯತ್ನ ಮಾಡ್ತಿದ್ದಾರೆ. ಬೆಸ್ಕಾಂ, ಜೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಕಂಪನಿಗಳ ಭವಿಷ್ಯಕ್ಕೆ ಆಪತ್ತು ಎದುರಾಗಿದೆ. ಮಸೂದೆಯಿಂದ ವಿದ್ಯುತ್ ವಿತರಣೆ ಮೇಲಿನ ರಾಜ್ಯಗಳ ಸ್ವಾಯತ್ತತೆಗೂ ಧಕ್ಕೆ ಎದುರಾಗಲಿದೆ ಅಂತಾ ಕೆಪಿಟಿಸಿಎಲ್, ಬೆಸ್ಕಾಂ ನೌಕರರು ಆಕ್ರೋಶ ಹೊರಹಾಕಿದ್ರು.
ಖಾಸಗಿ ಕಂಪನಿಗಳಿಗೆ ಅವಕಾಶ ಮಾಡಿಕೊಟ್ರೆ ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿಗಳಿಗೆ ಭಾರೀ ನಷ್ಟವಾಗುತ್ತೆ. ಜೊತೆಗೆ ಪೈಪೋಟಿಯೂ ಏರ್ಪಟ್ಟು, ಗ್ರಾಮೀಣ ಭಾಗದ ಜನರಿಗೆ ತೊಂದರೆ ಆಗುತ್ತೆ. ನವೀಕರಿಸಬಹುದಾದ ಇಂಧನ ಖರೀದಿ ಬಾಧ್ಯತೆಗಳನ್ನು ಈಡೇರಿಸದಿದ್ದರೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತೆ ಅಂತಾ ಹಲವು ರಾಜ್ಯಗಳು ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿವೆ. ಇದೇ ಅಲ್ಲದೇ, ಪ್ರಾದೇಶಿಕ ಲೋಡ್ ಡಿಸ್ ಪ್ಯಾಚ್, ಸ್ಟೇಟ್ ಲೋಡ್ ಡಿಸ್ಪ್ಯಾಚ್ ಕೇಂದ್ರಗಳು ರಾಷ್ಟ್ರೀಯ ಲೋಡ್ ಡಿಸ್ಪ್ಯಾಚ್ ಕೇಂದ್ರಗಳ ಸೂಚನೆಯನ್ನು ಪಾಲಿಸಬೇಕು ಅನ್ನೋ ಬಗ್ಗೆ ಆತಂಕ ವ್ಯಕ್ತವಾಗಿದೆ. ಕಾಯ್ದೆ ನಿಯಮಗಳು ಯಥಾವತ್ತಾಗಿ ಜಾರಿಯಾದರೆ ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ಬರಲಿದೆ. ಆಗ ರಾಜ್ಯ ಸರ್ಕಾರಗಳು ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳುತ್ತವೆ ಅಂತಾ ದೂರಿದ್ದಾರೆ.
ಸಂಸತ್ ಕಲಾಪದಲ್ಲಿ ವಿದ್ಯುತ್ ತಿದ್ದುಪಡಿ ಬಿಲ್ ಮಂಡನೆಯಾಗಿದೆ. ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಮುಂದೆ ಇಡಲಾಗಿದೆ.ಸದ್ಯ ಈ ವಿವಾದಿತ ಮಸೂದೆ ವಿರುದ್ಧ ರಾಜ್ಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಇರುವ ಸುಮಾರು 27 ಲಕ್ಷ ವಿದ್ಯುತ್ ಸರಬರಾಜು ಕಂಪನಿಗಳ ನೌಕರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಆನಂದ್ ನಂದಗುಡಿ ಸ್ಪೆಷಲ್ ಕರೆಸ್ಪಾಂಡೆಂಟ್ ಪವರ್ ಟಿವಿ ಬೆಂಗಳೂರು