ಹಾಸನ: ಅಸ್ಲೆ ಮಳೆ ಹುಯ್ದು ಸೊಸಲು ಬೆಟ್ಟ ಏರಿತು ಅನ್ನೊ ಗಾದೆ ಮಾತಿನಂತೆ ಆಶ್ಲೇಷ ಮಳೆ ಜಿಲ್ಲೆಯ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಅರಕಲಕೂಡು ತಾಲೂಕಿನಲ್ಲಂತೂ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮನೆಯಿಂದ ಜನ ಹೊರ ಹೋಗದಂತೆ ಜಡಿ ಮಳೆ ಹಿಡಿದಿದೆ. ಇತ್ತ ಮನೆಯೊಳಗೂ ಸಹ ಜೀವ ಕೈಯಲ್ಲಿಡುದು ಬದುಕುವಂತಾಗಿದೆ. ಯಾವ ಕ್ಷಣದಲ್ಲಿ ಮನೆ ಕುಸಿದು ಬೀಳಬಹುದೊ ಆನ್ನೊ ಆತಂಕದಲ್ಲಿ ತಾಲೂಕಿನ ಅದೆಷ್ಟು ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ. ಈಗಾಗಲೆ ತಾಲೂಕಿನಲ್ಲಿ ನೂರಾರು ಮನೆಗಳು ಕುಸಿದು ಬಿದ್ದಿವೆ.
ಸಾವಿರಾರು ಮನೆಗಳು ಕುಸಿಯುವ ಹಂತದಲ್ಲಿವೆ. ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮದ ಕಾಳಶೆಟ್ಟಿ ಅವರ ಪತ್ನಿ ಶಾಂತಮ್ಮ ಅವರ ಮನೆ ಕುಸಿದು ಬಿದ್ದಿದೆ. ಸದ್ಯ ಮನೆ ಕುಸಿಯುವ ಸಂದರ್ಭದಲ್ಲಿ ಶಾಂತಮ್ಮ ಅವರು ಹೊರಗೆ ಇದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಕುಸಿದಿರುವುದರಿಂದ ತಮ್ಮ ಪುತ್ರಿ ಶಿಲ್ಪಾ ಹರೀಶ್ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಮನೆ ಕಳೆದುಕೊಂಡು ಕಣ್ಣೀರಿಡುತ್ತಿರುವ ಶಾಂತಮ್ಮ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.