ಚಾಮರಾಜಪೇಟೆ : ಕಳೆದ ಮೂರು ತಿಂಗಳಿಂದ ಭಾರಿ ವಿವಾದಕ್ಕೆ ಕಾರಣವಾಗಿದ್ದ ಚಾಮರಾಜಪೇಟೆ ಮೈದಾನ ವಿಚಾರ ಅಂತ್ಯ ಕಂಡಿದೆ ಅನ್ನುವಷ್ಟರಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮೊನ್ನೆಯಷ್ಟೆ ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್ ಸರಿಯಾದ ದಾಖಲೆ ಯಾರ ಬಳಿಯೂ ಇಲ್ಲದಿರುವ ಹಿನ್ನೆಲೆ ಸರ್ಕಾರದ ಸ್ವತ್ತು ಎಂದು ಘೋಷಣೆ ಮಾಡಿದರು. ಹೀಗಾಗಿ ಹಲವು ದಿನಗಳ ವಿವಾದಕ್ಕೆ ತೆರೆ ಬಿತ್ತು ಎನ್ನುತ್ತಿರುವಾಗಲೇ, ಶಾಸಕ ಜಮೀರ್ ಅಹಮದ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಮಸೀದಿ ಹಾಗೂ ಮಂದಿರ ವಿವಾದಗಳ ಬೆನ್ನಲ್ಲೆ ಈದ್ಗಾ ಮೈದಾನ ವಿಚಾರ ಇನ್ನಷ್ಟು ತಾರಕಕ್ಕೇರಿದೆ. ಶಾಸಕ ಜಮೀರ್ ಅಹಮದ್ ಖಾನ್ ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ದಿಢೀರ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ರು. ಗಣೇಶೋತ್ಸವ ಸೇರಿದಂತೆ ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸಲು ಬಿಡಲ್ಲ ಎಂದಿರೋದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.
ಇನ್ನೂ ಜಮೀರ್ ಹೇಳಿಕೆಯ ಬೆನ್ನಲ್ಲೆ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಹಾಗೂ ಹಿಂದೂಪರ ಸಂಘಟನೆ ಕೆಂಡಕಾರಿವೆ. ಗಣೇಶೋತ್ಸವಕ್ಕೆ ಅನುಮತಿ ನೀಡಲು ಇವರ್ಯಾರು? ಈ ಬಾರಿ ನಾವು ಅದ್ದೂರಿಯಾಗಿ ಗಣೇಶೋತ್ಸವನ್ನು ಮಾಡೇ ಮಾಡ್ತೀವಿ ಎಂದ್ರು.
ಮೈದಾನವು ಕಂದಾಯ ಇಲಾಖೆಯ ಸುಪರ್ದಿಯಲ್ಲಿಯೇ ಇದೆ. ಯಾವ ಆಚರಣೆಗೆ ಮೈದಾನ ಕೊಡಬೇಕು ಎನ್ನುವುದು ಕಂದಾಯ ಇಲಾಖೆಯ ವಿವೇಚನೆಗೆ ಬಿಟ್ಟ ಸಂಗತಿ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಹಲವು ದಿನಗಳಿಂದ ಒಂದಲ್ಲ ಒಂದು ವಿವಾದವನ್ನು ಸೃಷ್ಟಿ ಮಾಡಿ ಜನರ ನೆಮ್ಮದಿ ಕೆಡಿಸಿದ್ದ ಮೈದಾನ ವಿಚಾರ, ಈಗ ಮತ್ತೊಂದು ಸ್ವರೂಪ ಪಡೆದಿದೆ. ಬಿಬಿಎಂಪಿ ಹೆಗಲ ಮೇಲಿದ್ದ ಜವಾಬ್ದಾರಿ ಈಗ ಸರ್ಕಾರದ ಮೇಲಿದೆ. ಇವೆಲ್ಲದರ ಮಧ್ಯೆ ಮೈದಾನದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸ್ತೀವಿ ಅಂತಾ ಹೇಳ್ತಿದ್ದಾರೆ. ಇತ್ತ ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ ಎಂಬ ಜಮೀರ್ ಹೇಳಿಕೆ ಒಂದಷ್ಟು ಗೊಂದಲ ಸೃಷ್ಟಿ ಮಾಡಿದ್ದು ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆಯಲಿದೆ ಅನ್ನೋದನ್ನು ಕಾದುನೋಡ್ಬೇಕಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು