ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ.
ಭಾರತೀಯ ಕಾಲಮಾನದ ಪ್ರಕಾರ ಶನಿವಾರ ತಡರಾತ್ರಿ ನಡೆದ ಪ್ಯಾರಾ ಟೇಬಲ್ ಟೆನ್ನಿಸ್ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಆಟಗಾರ್ತಿ ಭವಿನಾ ಪಟೇಲ್ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ನೈಜೀರಿಯಾದ ಇಫೆಚುಕ್ವುಡೆ ಕ್ರಿಸ್ಟಿಯಾನಾ ಇಕ್ಪಿಯೋಯಿ ಅವರನ್ನು ಮಣಿಸಿ ಬಂಗಾರದ ಪದಕ ಬಾಜಿಕೊಂಡಿದ್ದಾರೆ. ಅತ್ಯುತ್ತಮ ಪ್ರದರ್ಶನ ನೀಡಿದ ಪಟೇಲ್, 12-10, 11-2, 11-9 ರಲ್ಲಿ ಇಕ್ಪಿಯೊಯಿ ವಿರುದ್ಧ ಪ್ರಾಬಲ್ಯ ಸಾಧಿಸಿದರು.
ಆಡಿದ ಮೂರು ಸುತ್ತುಗಳಲ್ಲಿಯೂ ಪರಾಕ್ರಮ ಮೆರೆದ ಪಟೇಲ್, ಅಂತಿಮವಾಗಿ ಐತಿಹಾಸಿಕ ಸಾಧನೆ ತೋರಿದ್ದಾರೆ. ಇದಕ್ಕೂ ಮೊದಲು, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಮತ್ತೋರ್ವ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಸೋನಾಲ್ಬೆನ್ ಮನುಭಾಯ್ ಪಟೇಲ್ ಅವರು ಇಂಗ್ಲೆಂಡ್‌ನ ಸ್ಯೂ ಬೈಲಿಯನ್ನು ಸೋಲಿಸಿ ಕಂಚಿನ ಪದಕ ಸಂಪಾದಿಸಿದರು. ಇನ್ನು ಭಾರತ ಪುರುಷರ ಹಾಕಿ ತಂಡ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಬರ್ಮಿಂಗ್ಹ್ಯಾಮ್ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿ ರೋಚಕ ಜಯ ಸಾಧಿಸಿತು. ಆರಂಭದಿಂದಲೂ ಸಾಕಷ್ಟು ರೋಚಕತೆ ಸೃಷ್ಟಿಸಿದ ಪಂದ್ಯದ ಮೊದಲ ಕ್ವಾರ್ಟರ್ನಲ್ಲಿ ಉಭಯ ತಂಡಗಳಿಗೆ ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ.