ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ದಿನೇ ದಿನೇ ಒಂದಲ್ಲಾ ಒಂದು ಗ್ರಾಮದಲ್ಲಿ ಕಲುಷಿತ ನೀರಿಗೆ ಅಸ್ವಸ್ಥರಾಗೋರ ಸಂಖ್ಯೆ ಏರುತ್ತಲೇ ಇದೆ. ಇದೀಗ ಸಂಡೂರು ತಾಲೂಕಿನ ಅಂಕಮನಾಳ ಗ್ರಾಮದ ಸರದಿ. ನಿನ್ನೆಯಿಂದ ಕಲುಷಿತ ನೀರು ಸೇವಿಸಿ ಇದುವರೆಗೂ 84 ಜನ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಈ ವಿಚಾರ ತಿಳಿಯುತ್ತಿದಂತೆ ಸಂಡೂರು ಶಾಸಕ ಇ ತುಕಾರಾಂ ಮತ್ತು ಸಾರಿಗೆ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ಬಗ್ಗೆ ವಿಚಾರಣೆ ಮಾಡಿದ್ರು
ಇನ್ನು ಗ್ರಾಮದಲ್ಲಿ ಸರಬರಾಜಾಗುತ್ತಿರೋ ನೀರಿನೊಂದಿಗೆ ಚರಂಡಿ ನೀರು ಮಿಶ್ರಣವಾಗಿರೋದೆ ಇದಕ್ಕೆಲ್ಲಾ ಮೂಲ ಕಾರಣ ಎನ್ನಲಾಗ್ತಿದೆ. ಅಲ್ದೆ ಹಳ್ಳದಲ್ಲಿ ಬೋರ್ ಹಾಕಿದ್ದು, ಅದರಿಂದಲೂ ಈ ಸಮಸ್ಯೆ ಉಂಟಾಗಿದೆ ಎನ್ನೋ ಮಾತುಗಳೂ ಸಹ ಕೇಳಿಬರ್ತಿವೆ. ಇನ್ನು ನ್ಯಾಯಬೆಲೆ ಅಂಗಡಿಯಲ್ಲಿ ಸರಬರಾಜಾಗಿರುವ ಅಕ್ಕಿಯನ್ನೂ ಸಹ ಪರೀಕ್ಷೆ ಮಾಡುವಂತೆ ಗ್ರಾಮಸ್ಥರು ಸಚಿವರಿಗೆ ಒತ್ತಾಯಿಸಿದ್ದಾರೆ. ಇನ್ನು ಅಸ್ವಸ್ಥರಲ್ಲಿ ಸದ್ಯಕ್ಕೆ ಯಾರ ಪ್ರಾಣಕ್ಕೆ ಅಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ರೂ ಸಹ ಆತಂಕ ತಪ್ಪಿಲ್ಲ.ಇನ್ನು ಈ ಕುರಿತು ಪವರ್ ಟಿವಿ ಜೊತೆ ಮಾತನಾಡಿದ ಶ್ರೀರಾಮುಲು ಆದಷ್ಟು ಬೇಗ ಸಮಸ್ಯೆ ಬಗೆ ಹರಿಸೋದಾಗಿ ಭರವಸೆ ನೀಡಿದ್ರು.
ಒಟ್ಟಾರೆ ಕಲುಷಿತ ನೀರಿಗೆ ಇನ್ನೆಷ್ಟು ಜನ ಅಸ್ವಸ್ಥ ಆಗಬೇಕೋ ಗೊತ್ತಿಲ್ಲ, ಕುಡಿಯೋ ನೀರೆಲ್ಲ ಕಲುಷಿತವೇ ಆದರೆ ಪಾಪ ಅವರಾದ್ರೂ ಏನು ಮಾಡೋಕೆ ಆಗುತ್ತೆ. ಮಳೆಗಾಲ ಆರಂಭವಾದಾಗಿನಿಂದ ಗಣಿನಾಡಿನ ಒಂದಲ್ಲಾ ಒಂದು ಗ್ರಾಮದಲ್ಲಿ ಈ ಬಗೆಯ ಸಮಸ್ಯೆ ಉಲ್ಬಣಿಸುತ್ತಿರೋದು ಆತಂಕಕ್ಕೆ ಕಾರಣವಾಗಿದೆ.
ಬಸವರಾಜ ಹರನಹಳ್ಳಿ ಪವರ್ ಟಿವಿ,ಬಳ್ಳಾರಿ