Monday, December 23, 2024

ಹಾಡುಗಳಿಂದ ಕಣ್ಮನ ತಣಿಸುತ್ತಿರೋ ಸಂದೀಪ್ ಆಶಿಕಿ

ಕಲರ್​ಫುಲ್ ಸಾಂಗ್ಸ್​ನಿಂದ ಸಖತ್ ಗುಂಗಿಡಿಸ್ತಿದೆ ಸ್ಯಾಂಡಲ್​ವುಡ್ ಆಶಿಕಿ. ಅರೇ.. ಬಾಲಿವುಡ್​ನ ಆಶಿಕಿ-2 ಏನಾದ್ರು ಕನ್ನಡಕ್ಕೆ ಡಬ್ ಆಗಿ ತೆರೆಗೆ ಬರ್ತಿದೆಯಾ ಅಂತ ಕನ್ಫ್ಯೂಸ್ ಆಗ್ಬೇಡಿ. ಇದು ಪಕ್ಕಾ ಕನ್ನಡಿಗರ ಇಂಟೆನ್ಸ್ ಲವ್ ಸ್ಟೋರಿ. ಹೆಂಗೆಳೆಯರ ಹಾರ್ಟ್​ ಗೆಲ್ಲೋಕೆ ಬರ್ತಿರೋ ಬ್ಯೂಟಿಫುಲ್ ಮನಸುಗಳ ಕನಸಿನ ಚಿತ್ರದ ರಿಪೋರ್ಟ್​ ನೀವೇ ಓದಿ.

  • ಐಶ್ವರ್ಯಾ ಜೊತೆ ನಾಯಕನಟನಾಗಿ ಸಿನಿ ಪತ್ರಕರ್ತ..!
  • ಸೆನ್ಸಾರ್​ನಿಂದ ಯುಎ ಸರ್ಟಿಫಿಕೆಟ್.. ದಸರಾಗೆ ತೆರೆಗೆ
  • ಆಗ್ರಾ, ಕುಲು ಮನಾಲಿಯ ಕಣ್ಣು ಕೋರೈಸೋ ತಾಣಗಳು

ಯೆಸ್.. ಇವು ರೀಸೆಂಟ್ ಆಗಿ ರಿಲೀಸ್ ಆದ ಆಶಿಕಿ ಚಿತ್ರದ ಸಾಂಗ್ ಝಲಕ್​ಗಳು. ಆಶಿಕಿ ಅಂದಾಕ್ಷಣ ನೆನಪಾಗೋದೇ ಆದಿತ್ಯ ರಾಯ್ ಕಪೂರ್- ಶ್ರದ್ಧಾ ಕಪೂರ್​ ಜೋಡಿಯ ಆಶಿಕಿ-2. ಮರೆಯಲಾಗದ ಪ್ರೀತಿ ಪ್ರೇಮ ಪ್ರಣಯದ ದೃಶ್ಯಕಾವ್ಯ. ಇದೀಗ ಅದೇ ಬಗೆಯ ಇಂಟೆನ್ಸ್ ಮ್ಯೂಸಿಕಲ್ ಲವ್ ಸ್ಟೋರಿ ಕನ್ನಡದಲ್ಲೂ ಬರ್ತಿದೆ. ಅದ್ರ ಟೈಟಲ್ ಕೂಡ ಆಶಿಕಿ ಅಂತಿರೋದು ಕಾಕತಾಳೀಯ.

ಸಿನಿಮಾ ವರದಿಗಾರನಾಗಿಯೇ ಬದುಕು ಕಟ್ಟಿಕೊಂಡಿದ್ದ ಸಂದೀಪ್ ಕುಮಾರ್, ಮಾಣಿಕ್ಯ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಕಲಾವಿದನಾಗಿ ಕಾಲಿಟ್ಟಿದ್ದರು. ನಂತ್ರ ಡೆಡ್ಲಿ ಆದಿತ್ಯ ಜೊತೆ ಮುಂದುವರೆದ ಅಧ್ಯಾಯ ಅನ್ನೋ ಚಿತ್ರ ಕೂಡ ಮಾಡಿದ್ರು. ಆದ್ರೀಗ ಫಾರ್ ದ ಫಸ್ಟ್ ಟೈಂ, ಅವ್ರೇ ನಾಯಕನಟನಾಗಿ ಇಂಟ್ರಡ್ಯೂಸ್ ಆಗ್ತಿದ್ದಾರೆ. ಆಶಿಕಿ ಚಿತ್ರದ ಲೀಡ್​ನಲ್ಲಿ ರಾಕ್​ಸ್ಟಾರ್ ಆಗಿ ಸಂದೀಪ್ ಕಾಣಿಸಿಕೊಂಡ್ರೆ, ಅವ್ರಿಗೆ ಜೋಡಿಯಾಗಿ ಐಶ್ವರ್ಯಾ ಸಿಂಧೋಗಿ ನಟಿಸಿದ್ದಾರೆ.

ಕ್ವಾಟ್ಲೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕಿ ಚಂದ್ರಕಲಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಂದ್ರಶೇಖರ್ ಬಂಡವಾಳ ಹಾಕಿದ್ದು, ಸುಮಾರು 55 ದಿನಗಳ ಕಾಲ ಬೆಂಗಳೂರಿಂದ ಕುಲು ಮನಾಲಿವರೆಗೂ ಚಿತ್ರಿಸಲಾಗಿದೆ. ವೈಜಾಗ್, ಆಗ್ರಾ, ಪಂಜಾಬ್, ಚಂಡೀಘರ್, ವಾಘಾ ಬಾರ್ಡರ್, ಚಿಕ್ಕಮಂಗಳೂರು, ಕೇರಳ ಹೀಗೆ ಸೌತ್​ನಿಂದ ನಾರ್ಥ್ ವರೆಗೂ ಕಣ್ಣು ಕೋರೈಸೋ ಅಂತಹ ಸುಂದರ ತಾಣಗಳಲ್ಲಿ ಸೆರೆಹಿಡಿದಿದ್ದಾರೆ ಸಿನಿಮಾಟೋಗ್ರಫರ್ ರಾಜರತ್ನ ಹಾಗೂ ನವೀನ್.

ನಾಲ್ಕೈದು ತಮಿಳು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ಲಿಯೋ ಈ ಆಶಿಕಿ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದು, ಕೇಳೋಕೆ ಸಖತ್ ಇಂಪಾಗಿವೆ. ಸದ್ಯ ರಿಲೀಸ್ ಆಗಿರೋ ಎರಡೂ ಹಾಡುಗಳಿಗೆ ಅಶ್ವಿನ್ ಶರ್ಮಾ ಕಂಠವಿರೋದು ಇಂಟರೆಸ್ಟಿಂಗ್. ಇದೇ ತಿಂಗಳಾಂತ್ಯಕ್ಕೆ ಟೀಸರ್ ಲಾಂಚ್ ಮಾಡೋ ಯೋಜನೆಯಲ್ಲಿರೋ ಚಿತ್ರತಂಡ, ರೀಸೆಂಟ್ ಆಗಿ ಸೆನ್ಸಾರ್​ನಿಂದ ಯುಎ ಸರ್ಟಿಫಿಕೆಟ್ ಪಡೆದಿದೆ.

ನಾಡಹಬ್ಬ ದಸರಾಗೆ ಚಿತ್ರ ರಿಲೀಸ್ ಆಗಲಿದ್ದು, ಸದ್ಯ ಹಾಡುಗಳಿಂದ ಭರವಸೆ ಮೂಡಿಸಿದೆ ಆಶಿಕಿ. ಸಿನಿಮಾ ವರದಿಗಾರನಾಗಿ ಸಾವಿರಾರು ಸಿನಿಮಾಗಳ ಸುದ್ದಿಗಳನ್ನ ಪ್ರಚಾರ ಮಾಡಿದ್ದ ಸಂದೀಪ್ ಕುಮಾರ್, ಇದೀಗ ತಮ್ಮದೇ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗೋದು ನಿಜಕ್ಕೂ ಖುಷಿಯ ವಿಚಾರ. ಅದೇನೇ ಇರಲಿ, ಸ್ಯಾಂಡಲ್​ವುಡ್​ ಅಂಗಳಕ್ಕೆ ಹೀರೋ ಆಗಿ ಕಾಲಿಡ್ತಿರೋ ಸಂದೀಪ್​ಗೆ ಬಹುದೊಡ್ಡ ಯಶಸ್ಸು ಸಿಗಲಿ, ಕನ್ನಡಿಗರು ಕೈಹಿಡಿಯಲಿ ಅಂತ ಶುಭ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES