Wednesday, January 22, 2025

ಬೆಳ್ಳಿತೆರೆಗೆ ಜೂನಿಯರ್ ಕನಸಿನ ರಾಣಿ ರಾಧನಾ ರಾಮ್

ನಮ್ಮಲ್ಲಿ ಹೀರೋಯಿನ್​ಗಳ ಕೊರತೆ ಇದೆ ಅಂತ ಪರಭಾಷಾ ನಟೀಮಣಿಯರಿಗೆ ಮೊರೆ ಹೋಗೋ ಅವಶ್ಯಕತೆ ಇಲ್ಲ. ಯಾಕಂದ್ರೆ ಚಂದನವನಕ್ಕೆ ಹೊಚ್ಚ ಹೊಸ ಚೆಲುವೆಯರ ಆಗಮನ ಆಗ್ತಾ ಇರುತ್ತೆ. ಅದ್ರಲ್ಲೂ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಎಂಟ್ರಿ ಭರವಸೆ ಮೂಡಿಸಿದೆ. ಇಷ್ಟಕ್ಕೂ ಆಕೆ ಹೇಗಿದ್ದಾಳೆ..? ಕ್ಲಾಸಾ ಮಾಸಾ ಅನ್ನೋದ್ರ ಸ್ಪೆಷಲ್ ರಿಪೋರ್ಟ್​ ನಿಮ್ಮ ಮುಂದೆ.

  • ತಂದೆ ಅನುಪಸ್ಥಿತಿಯಲ್ಲೇ ಇಂಡಸ್ಟ್ರಿಗೆ ಗ್ರ್ಯಾಂಡ್ ಎಂಟ್ರಿ
  • ಚಿತ್ರರಂಗದ ಪ್ರಾಮಿಸಿಂಗ್ ನಟೀಮಣಿಯಾಗಲಿ ರಾಧನಾ
  • ರಾಕ್​ಲೈನ್ ಪ್ರೊಡಕ್ಷನ್​.. ಪುತ್ರಿಗೆ ಮಾಲಾಶ್ರೀ ಶುಭಾಶಯ

70ರ ದಶಕದಿಂದ ಇಂದಿನವರೆಗೆ ಬಾಲನಟಿಯಾಗಿ, ನಟಿಯಾಗಿ, ಸೂಪರ್ ಸ್ಟಾರ್, ಲೇಡಿ ಸೂಪರ್ ಸ್ಟಾರ್ ಹೀಗೆ ಬಹುದೊಡ್ಡ ಛಾಪು ಮೂಡಿಸಿರೋ ಏಕೈಕ ನಟೀಮಣಿ ಅಂದ್ರೆ ಕನಸಿನ ರಾಣಿ ಮಾಲಾಶ್ರೀ. ಹೌದು.. ಇವ್ರ ಕೊಡುಗೆ ಚಿತ್ರರಂಗಕ್ಕೆ ಅಷ್ಟಿಷ್ಟಲ್ಲ. ಮದ್ರಾಸ್​​ನಲ್ಲಿ ಜನಿಸಿದ ಶ್ರೀದುರ್ಗ, ಕರುನಾಡಿನ ಮಾಲಾಶ್ರೀ ಆಗಿದ್ದೇ ಇಂಟರೆಸ್ಟಿಂಗ್.

ಪಾರ್ವತಮ್ಮ ರಾಜ್​ಕುಮಾರ್ ಮಾಲಾಶ್ರೀಗೆ ನೂತನ ಹೆಸ್ರು ಸೂಚಿಸಿದ್ದಲ್ಲದೆ, ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯಿಸಿದ್ರು. ರಾಮಾಚಾರಿ, ಬೆಳ್ಳಿ ಕಾಲುಂಗುರ, ಹೃದಯ ಹಾಡಿತು, ಬೆಳ್ಳಿ ಮೋಡಗರು ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡಿದ್ರು. ಕೊನೆಗೆ ನಮ್ಮ ಕನ್ನಡದ ಖ್ಯಾತ ನಿರ್ಮಾಪಕ ಕೋಟಿ ರಾಮು ಕೈಹಿಡಿದು ಕರ್ನಾಟಕದ ಸೊಸೆಯಾದ್ರು.

ರಾಮು ಕೂಡ ತಮ್ಮ ಬ್ಯಾನರ್​ನಲ್ಲಿ ಲಾಕಪ್​ ಡೆತ್, ಎಕೆ 47, ಸಿಂಹದ ಮರಿ, ಕಿಚ್ಚ, ಹಾಲಿವುಡ್ ಸೇರಿದಂತೆ ಸುಮಾರು 40ಕ್ಕೂ ಅಧಿಕ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಿಸಿದ್ರು. ನೂರಾರು ಚಿತ್ರಗಳನ್ನ ಡಿಸ್ಟ್ರಿಬ್ಯೂಟ್ ಮಾಡಿದ್ರು. ರೀಸೆಂಟ್ ಆಗಿ ಲಾಕ್​ಡೌನ್ ವೇಳೆ ಕೊರೋನಾ ಸೋಂಕಿನಿಂದ ಕೊನೆಯುಸಿರೆಳೆದರು. ಆದ್ರೆ ಅವ್ರ ಕನಸಿನ ಕೂಸು ರಾಧನಾ ರಾಮ್, ಪೋಷಕರಲ್ಲಿದ್ದ ಸಿನಿಮೋತ್ಸಾಹಕ್ಕೆ ರೆಕ್ಕೆ ಕಟ್ಟಿ ನಾಯಕನಟಿಯಾಗಿ ಇಂಡಸ್ಟ್ರಿಗೆ ಪದಾರ್ಪಣೆ ಮಾಡ್ತಿದ್ದಾರೆ.

ಹಾಲು ಗಲ್ಲದ ಈ ಮುದ್ದು ಪೋರಿಯ ಹೆಸ್ರು ಅನನ್ಯಾ. ಸಿನಿಮಾಗಾಗಿ ರಾಧನಾ ಅಂತ ಹೆಸರು ಬದಲಿಸಿಕೊಂಡಿದ್ದು, ಮುಂಬೈನಲ್ಲಿ ಸುಮಾರು ಎರಡು ವರ್ಷಗಳಿಂದ ಸಿನಿಮಾ ತರಬೇತಿ ಕೋರ್ಸ್​ ಮಾಡಿ, ಪರಿಪಕ್ವವಾದ ಬಳಿಕವೇ ಕ್ಯಾಮೆರಾ ಫೇಸ್ ಮಾಡಲು ಬಂದಿದ್ದಾರೆ. ಇತ್ತೀಚೆಗಷ್ಟೇ ಬಿಬಿಎ ಪದವಿ ಮುಗಿಸಿರೋ ರಾಧನಾ ರಾಮ್​ರನ್ನ ರಾಕ್​ಲೈನ್ ವೆಂಕಟೇಶ್ ತಮ್ಮ ಪ್ರತಿಷ್ಠಿತ ಬ್ಯಾನರ್​ನಲ್ಲಿ ಈಕೆಯನ್ನ ಇಂಡಸ್ಟ್ರಿಗೆ ಕರೆತಂದಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸ್ತಿರೋ ಚಿತ್ರದಿಂದ ಈಕೆ ಕರಿಯರ್ ಶುರು ಮಾಡ್ತಿರೋದು ವಿಶೇಷ.

ಇತ್ತೀಚೆಗೆ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿದ್ದು, ಖುದ್ದು ಮಾಲಾಶ್ರೀ ಅವ್ರೇ ರಾಧನಾರನ್ನ ಕರೆತಂದು, ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದ್ರು. ಕೊನೆಗೆ ಆಕೆಗೆ ಕುಂಕುಮವಿಟ್ಟು ಶುಭ ಹಾರೈಸಿದ್ರು. ಹೈಟು, ವೆಯ್ಟ್ ಜೊತೆ ಅಂದ ಚೆಂದದಲ್ಲೂ ಥೇಟ್ ಕನಸಿನ ರಾಣಿಯಂತಿರೋ ಮಾಲಾಶ್ರೀ ಅವ್ರ ನೆರಳು ಈ ರಾಧನಾ.

ನಮ್ಮಲ್ಲಿ ನಟೀಮಣಿಯರಿಲ್ಲ ಅಂತ ಪರಭಾಷಿಗರ ಮೊರೆ ಹೋಗ್ತಿದ್ದ ನಿರ್ಮಾಪಕರಿಗೆ ರಾಧನಾರಂತಹ ಚೆಲುವೆಯರ ಆಪ್ಷನ್ ಸಿಗಲಿದೆ. ಒಟ್ಟಾರೆ ರಾಧನಾ ಸಖತ್ ಪ್ರಾಮಿಸಿಂಗ್ ಆಗಿದ್ದು, ಭವಿಷ್ಯದ ಭರವಸೆಯ ನಟಿಯಾಗಿ ಮಿಂಚಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES