Sunday, January 19, 2025

ಕೇಂದ್ರ ಸರ್ಕಾರದ ವಿರುದ್ದ ಸಿಡಿದೆದ್ದ ಕಾಂಗ್ರೆಸ್ ನಾಯಕರು

ನವದೆಹಲಿ : ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ದೇಶದಲ್ಲಿ ನಿರಂತರವಾಗಿ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳವಾಗುತ್ತಿದೆ ಅಂತ ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ಕೈಗೊಂಡಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ಪಾರ್ಲಿಮೆಂಟ್ ಎದುರು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜಭವನ ಚಲೋ ಹೋರಾಟ ನಡೆಯಿತು. ಈ ವೇಳೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪ್ರತಿಭಟನಾಕಾರನ್ನು ಪೊಲೀಸರು ವಶಕ್ಕೆ ಪಡೆದರು.

ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು. ಸಂಸತ್ತಿನ ಗೇಟ್ ನಂಬರ್ 1 ಹೊರಗೆ ಪಕ್ಷದ ಮಹಿಳಾ ಸಂಸದರೊಂದಿಗೆ ಸೋನಿಯಾ ಗಾಂಧಿ ಬ್ಯಾನರ್ ಹಿಡಿದು ನಿಂತು, ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಹೆಚ್ಚಳವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇನ್ನು ಪ್ರಧಾನಿ ಮನೆಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಪ್ರತಿಭಟನಾಕಾರರು ಯತ್ನಿಸಿದರು. ಈ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ, ಶಶಿ ತರೂರ್ ಸೇರಿದಂತೆ ಹಲವು ಕಾಂಗ್ರೆಸ್ ಸಂಸದರನ್ನು ಪೊಲೀಸರು ವಶಕ್ಕೆ ಪಡೆದರು. ಸಂಸತ್ತಿನ ಹೊರಗೆ ಧರಣಿ ನಡೆಸಿದ್ದಕ್ಕಾಗಿ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆಯಲಾಗಿದೆ. ಸಂಸತ್ತಿನ ಹೊರಗೆ ಧರಣಿ ನಡೆಸಿದ ಸಂಸದರೊಂದಿಗೆ ರಾಹುಲ್ ಗಾಂಧಿ ರಾಷ್ಟ್ರಪತಿ ಭವನದತ್ತ ಹೊರಟಿದ್ದರು. ಈ ವೇಳೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಅಧೀರ್ ರಂಜನ್ ಚೌಧರಿ ಮತ್ತು ಕೆ.ಸಿ ವೇಣುಗೋಪಾಲ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಕಾಂಗ್ರೆಸ್ ಪ್ರತಿಭಟನೆಗೆ ಅನುಮತಿ ನೀಡಿರಲಿಲ್ಲ ಅಂತ ಪೊಲೀಸರು ಹೇಳಿದ್ದಾರೆ.

ಏಕ ಕಾಲದಲ್ಲಿ ದೆಹಲಿಯ ನಾನಾ ಭಾಗಗಳಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ರು. ಸಂಸತ್ ಬಳಿಕ ವಿಜಯ್ ಚೌಕ್ ನಿಂದ ರಾಷ್ಟ್ರಪತಿ ಭವನದ ತನಕ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದ ಕಾಂಗ್ರೆಸ್ ಸಂಸದರಿಗೆ ಪೊಲೀಸರು ತಡೆ ಒಡ್ಡಿದ್ರು. ದಾರಿ ಮಧ್ಯದಲ್ಲಿ ಪ್ರಿಯಾಂಕ ವಾದ್ರಾರನನ್ನು ತಡೆದಿದ್ದಕ್ಕೆ ರಸ್ತೆಯಲ್ಲಿ ಕುಳಿತು ಪೊಲೀಸರ ವಿರುದ್ದವೇ ಆಕ್ರೋಶ ವ್ಯಕ್ತಪಡಿಸಿದ್ರು. ಪ್ರಿಯಾಂಕಾ ವಾದ್ರಾ ಅವರನ್ನು ವಶಕ್ಕೆ ಪಡೆಯುವ ವೇಳೆ ರಂಪಾಟವೇ ನಡೀತು. ಬಲವಂತವಾಗಿ ಎಳೆದುಕೊಂಡು ಹೋದ್ರು ಪೊಲೀಸರು.

ಈ ಮಧ್ಯೆ, ಕೆಲವು ಸಂಸದರನ್ನು ಪೊಲೀಸರು ನಮ್ಮನ್ನು ಥಳಿಸಿದ್ದಾರೆ ಅಂತ ಕಾಂಗ್ರೆಸ್ ಆರೋಪ ಮಾಡಿದ್ದಾರೆ. ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್‌ಗೆ ತೀರುಗೇಟು ನೀಡಿರುವ ಬಿಜೆಪಿ, ವಂಶಾಡಳಿತ ಪಕ್ಷ ಎಂಬ ಹಣೆ ಪಟ್ಟಿ ಹೊತ್ತಿರುವ ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವ ಇದೆಯಾ ಅಂತಾ ಪ್ರಶ್ನೆ ಮಾಡಿದೆ.

ಸಂತೋಷ್ ಹೊಸಹಳ್ಳಿ, ಪವರ್ ಟಿವಿ, ನವದೆಹಲಿ.

RELATED ARTICLES

Related Articles

TRENDING ARTICLES