ಮಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪ್ರಕರಣ ರಾಜ್ಯದಲ್ಲಿ ಮಾತ್ರವಲ್ಲ. ಇಡೀ ದೇಶದಲ್ಲೇ ಸದ್ದು ಮಾಡಿದೆ. ಕೇರಳದಿಂದ ಬಂದವರು ಹತ್ಯೆ ಮಾಡಿದ್ದಾರೆಂದೇ ಬಿಜೆಪಿ ನಾಯಕರಾದಿಯಾಗಿ ಎಲ್ಲರೂ ಹೇಳಿಕೊಂಡಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯಂತೂ ತಲಶ್ಶೇರಿಯಲ್ಲಿ ಎನ್ಐಎ ಅಧಿಕಾರಿಗಳಿಂದ ಬಂಧಿಸಲ್ಪಟ್ಟ ವ್ಯಕ್ತಿಯೊಂದಿಗೂ ಥಳಕು ಹಾಕಿದ್ದರು. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವೀಣ್ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಿ ಕೈತೊಳೆದುಕೊಂಡಿದ್ದರು. ಅಷ್ಟೇ ಅಲ್ಲದೆ, ಹತ್ಯೆಯಲ್ಲಿ ಕೇರಳ ಲಿಂಕ್ ಇರುವುದರಿಂದ ತನಿಖೆಯನ್ನು ಎನ್ಐಎ ಅಧಿಕಾರಿಗಳೇ ನಡೆಸುವುದು ಸೂಕ್ತ ಎಂದು ಉಲ್ಲೇಖವನ್ನೂ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವರ ಮೌಖಿಕ ಸೂಚನೆಯ ಬೆನ್ನಲ್ಲೇ ಬೆಂಗಳೂರು ಮತ್ತು ಹೈದರಾಬಾದಿನ ಎನ್ಐಎ ಅಧಿಕಾರಿಗಳು ನಾಲ್ಕು ದಿನಗಳ ಹಿಂದೆಯೇ ಪುತ್ತೂರಿಗೆ ಆಗಮಿಸಿದ್ದು, ಸುಳ್ಯ ಮತ್ತು ಬೆಳ್ಳಾರೆಯಲ್ಲಿ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ನಡುವೆ, ಸ್ಥಳೀಯ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದು, ಸ್ಥಳೀಯರೇ ಕೆಲವರು ಸಂಚು ನಡೆಸಿದ್ದರು ಅನ್ನುವುದನ್ನೂ ಪತ್ತೆ ಮಾಡಿದ್ದಾರೆ. ಮಾಹಿತಿ ಇದೆ, ಶೀಘ್ರದಲ್ಲೇ ನಾವು ಬಂಧಿಸುತ್ತೇವೆ ಎಂದು ಎರಡು ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದ ಎಡಿಜಿಪಿ ಅಲೋಕ್ ಕುಮಾರ್ ಕೂಡ ಹೇಳಿದ್ದರು. ಆದರೆ ಇವೆಲ್ಲದರ ಮಧ್ಯೆ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ, ಸ್ಥಳೀಯರೇ ಹತ್ಯೆ ನಡೆಸಿದ್ದಾರೆ. ಯಾರು ಅನ್ನೋದು ಕೂಡ ಗೊತ್ತಾಗಿದೆ. ಯಾವ ಸಂಘಟನೆಯವರೆಂದು ಪತ್ತೆ ಮಾಡುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಸ್ಥಳೀಯರೇ ಹಂತಕರು ಎನ್ನುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ಎನ್ಐಎ ತನಿಖೆಯ ಬಗ್ಗೆಯೇ ಪ್ರಶ್ನೆ ಮೂಡಿಸಿದ್ದಾರೆ. ಒಂದೆಡೆ ಅಂತಾರಾಜ್ಯ ಮತ್ತು ಭಯೋತ್ಪಾದಕ ಲಿಂಕ್ ಇದೆಯೆಂದು ಹೇಳಿದ್ದಲ್ಲದೆ, ಹೈಪ್ರೊಫೈಲ್ ಕೇಸು ಅನ್ನುವಂತೆ ತೋರಿಸಿ ತನಿಖೆಯ ಹೊಣೆಯನ್ನು ಎನ್ಐಎಗೆ ಕೊಟ್ಟಿದ್ದಾರೆ. ಆದರೆ, ಅದರ ನಡುವೆ, ಸ್ಥಳೀಯರೇ ಹಂತಕರು ಎಂದು ಸ್ವತಃ ಪೊಲೀಸ್ ಇಲಾಖೆಯ ಮುಖ್ಯಸ್ಥರು ಹಾಗು ಗೃಹ ಸಚಿವರೇ ಹೇಳುತ್ತಿದ್ದು ಗೊಂದಲ ಮೂಡಿಸಿದ್ದಾರೆ. ಹಾಗಾದರೆ, ಸ್ಥಳೀಯ ಹಂತಕರನ್ನು ಹಿಡಿಯಲು ಕರ್ನಾಟಕ ಪೊಲೀಸ್ ಇಲಾಖೆಯಿಂದ ಸಾಧ್ಯವಿಲ್ಲವೇ ? ಸ್ಥಳೀಯ ಪೊಲೀಸರಿಗೆ ತಿಳಿದಿರುವ ಸ್ಥಳೀಯ ಹಂತಕರನ್ನು ಹಿಡಿಯಲು ದೂರದ ಎನ್ಐಎ ಅಧಿಕಾರಿಗಳನ್ನು ಕರೆತರಬೇಕಿತ್ತೆ ಎನ್ನುವ ಪ್ರಶ್ನೆ ಮೂಡಿಸಿದೆ.
ಈ ನಡುವೆ, ಸ್ಥಳೀಯರೇ ಹಂತಕರು ಎಂಬುದಾಗಿದ್ದರೆ, ಜುಲೈ 26ರಂದು ರಾತ್ರಿ ಹತ್ಯೆಗೆ ಬಳಸಿದ್ದ ಬೈಕಿನಲ್ಲಿ ನಕಲಿ ನಂಬರ್ ಪ್ಲೇಟ್ ಇಡಲಾಗಿತ್ತೇ ಅನ್ನುವ ಸಂಶಯ ಮೂಡಿಸಿದೆ. ಮಂಗಳೂರು ಪೊಲೀಸರು ಕಳೆದ ಹತ್ತು ದಿನಗಳಿಂದ ತಡಕಾಡುತ್ತಿದ್ದರೂ, ಈವರೆಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಹಂತಕರು ಯಾರೆಂದು ಪತ್ತೆ ಮಾಡುವುದಕ್ಕೂ ಆಗಿಲ್ಲ. ಹೀಗಿದ್ದರೂ, ದಿನಕ್ಕೊಂದು ಹೇಳಿಕೆ ಕೊಟ್ಟು ಬೀಸೋ ದೊಣ್ಣೆಯಿಂದ ಪಾರಾಗುವ ಯತ್ನವನ್ನಷ್ಟೇ ನಾಯಕರು ಮಾಡುತ್ತಿದ್ದಾರೆ. ಒಂದೆಡೆ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತನ ಹತ್ಯೆ ವಿಚಾರ ಪಕ್ಷದ ಒಳಗಡೆಯೇ ಆಕ್ರೋಶದ ಜ್ವಾಲೆ ಎಬ್ಬಿಸಿದ್ದರೆ, ಇದರಿಂದ ಪಾರಾಗಲು ಸಚಿವರು, ನಾಯಕರು ಒಂದೊಂದು ಹೇಳಿಕೆ ನೀಡತೊಡಗಿದ್ದಾರೆಯೇ ಎನ್ನೋ ಅನುಮಾನ ಮೂಡಿಸಿದೆ.
ಗಿರಿಧರ್ ಶೆಟ್ಟಿ ಪವರ್ ಟಿವಿ ಮಂಗಳೂರು