ಗದಗ : ಮಳೆ ಕಡಿಮೆ ಆದ್ರೂ ಅದರ ಅವಾಂತರ ಮಾತ್ರ ಕಡಿಮೆ ಆಗ್ತಿಲ್ಲ. ಹೌದು. ಗದಗನ ಬೆಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ನಂಬರ್ ೩ ರ ಶಾಲೆ ಜಲಾವೃತವಾಗಿದೆ.
ಮಳೆ ಹಾಗೂ ಚರಂಡಿ ನೀರು ಶಾಲೆಗೆ ನುಗ್ಗುತ್ತಿದ್ದು, ಮಳೆ ನೀರಿನಿಂದಾಗಿ ಶಾಲೆಗೆ ದಾರಿ ಯಾವುದಯ್ಯ ಅನ್ನುವಂತಾಗಿದೆ. ಇಲ್ಲಿ ೧ ರಿಂದ ೭ನೇ ತರಗತಿ ವರೆಗೆ ೧೭೫ ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದಾರೆ. ಈಗ ಮಳೆ ಅವಾಂತರದಿಂದ ನಾಲ್ಕು ತರಗತಿ ಕೊಠಡಿಗಳು ಹಾಗೂ ಅಡುಗೆ ಕೊಠಡಿ ಸಹ ಜಲಾವೃತವಾಗಿದೆ. ಮಕ್ಕಳ ಪುಸ್ತಕಗಳು, ಇತರೆ ಪೀಠೋಪಕರಣಗಳು ನೀರುಪಾಲಾಗಿವೆ.
ಇನ್ನು, ಕೊಠಡಿಗಳಲ್ಲಿ ಒಂದೂವರೆ ಅಡಿಯಷ್ಟು ನೀರು ತುಂಬಿಕೊಂಡಿದೆ. ತಗ್ಗು ಪ್ರದೇಶದಲ್ಲಿ ಶಾಲೆ ಇರುವುದರಿಂದ ಮೈದಾನ ಸಹ ನೀರು ತುಂಬಿಕೊಂಡಿದೆ. ಚರಂಡಿ ಹೂಳು ತುಂಬಿದ್ದರಿಂದ ನೀರು ಹೊರ ಹೋಗಲು ದಾರಿಯೇ ಇಲ್ಲದಂತಾಗಿದೆ. ೧ ರಿಂದ ೭ನೇ ತರಗತಿ ಮಕ್ಕಳು ಹೊಸ ೩ ಕೊಠಡಿಗಳಲ್ಲಿ ಒಟ್ಟಿಗೆ ಶಿಕ್ಷಣ ಪಡೆಯುವ ಅನಿವಾರ್ಯತೆ ಎದುರಾಗಿದೆ. ಶಾಲಾ ಆಡಳಿತ ಮಂಡಳಿಯವರು ಸಂಬಂಧಿಸಿದ ಅಧಿಕಾರಿಗಳು, ನಗರಸಭೆಗೆ ಹೇಳಿದ್ರೂ ಪ್ರಯೋಜನವಾಗಿಲ್ಲ. ಮಳೆ ಬಂದ್ರೆ ಶಿಕ್ಷಕರು, ಸಿಬ್ಬಂದಿಗಳು ಕಣ್ಣೀರು ಹಾಕ್ತಾರೆ. ಶಾಲಾ ಸಿಬ್ಬಂದಿ ನೀರು ಹೊರಹಾಕಲು ಹರಸಾಹಸ ಪಡ್ತಿದ್ದಾರೆ.