ಬಾಗಲಕೋಟೆ : ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದ ಸಾಕಷ್ಟು ಅವಾಂತರಗಳೇ ಸೃಷ್ಟಿಯಾಗಿದೆ.
ಜಿಲ್ಲೆಯ ಚಿಮ್ಮನಕಟ್ಟಿ, ಗೋವನಕೊಪ್ಪ & ಕುಳಗೇರಿ ಕ್ರಾಸ್ನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರು ನುಗ್ಗಿದ ಮನೆಗಳಿದ್ದ ವಸ್ತುಗಳನ್ನು ಜನರು ಸುರಕ್ಷಿತ ತಾಣಗಳಿಗೆ ಕೊಂಡೊಯ್ದರು. ಇತ್ತ ಚಿಮ್ಮನಕಟ್ಟಿ ಗ್ರಾಮದ ಸಕಾ೯ರಿ ಶಾಲೆಯ ಆವರಣ ನೀರಿನಿಂದ ತುಂಬಿತ್ತು. ಶಾಲೆಯ ಮಕ್ಕಳು ಅದೇ ನೀರಿನಲ್ಲಿ ನಡೆದುಕೊಂಡು ಹೋಗಿ ತರಗತಿಗೆ ಹಾಜರಾದ್ರು. ಗೋವನಕೊಪ್ಪದಲ್ಲಿ ಕೆಲ ಗುಡಿಸಲು ಸೇರಿದಂತೆ ಹಲವು ಮನೆಗಳಿಗೆ ನೀರು ನುಗ್ಗಿದ್ರಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಒಂದೆಡೆ ಮನೆ & ಶಾಲೆಯ ಆವರಣ ನೀರಿನಿಂದ ತುಂಬಿದ್ರೆ, ಮತ್ತೊಂದೆಡೆ ಜಿಲ್ಲೆಯ ಕೋಡಿಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರವಾಗಿ ಸುರಿದ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹೊಲ-ಗದ್ದೆಗಳು ಜಲಾವೃತಗೊಂಡಿದ್ವು. ಸಾಲಸೂಲ ಮಾಡಿ ಬೆಳೆದಿದ್ದ ಸೂರ್ಯಕಾಂತಿ, ತೊಗರಿ, ಸಜ್ಜೆ, ಎಳ್ಳು ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ನಾಶವಾಗಿವೆ. ಬೆಳೆ ಹಾನಿಯಿಂದ ಕಂಗಾಲಾದ ರೈತರು ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.