Friday, November 22, 2024

ಕೇರಳದಲ್ಲಿ ಪ್ರಳಯಕಾರಿ ವರುಣಾರ್ಭಟ

ಕೇರಳ : ದೇವರ ನಾಡು ಕೇರಳದಲ್ಲಿ ಪ್ರಳಯಕಾರಿ ವರುಣಾರ್ಭಟ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು. ಪ್ರವಾಹದ ರಭಸಕ್ಕೆ ಸಿಲುಕಿ ಪರದಾಡಿದ ಆನೆ. ಪಲ್ಟಿ ಹೊಡೆದ ಸಮುದ್ರಕ್ಕಿಳಿದ ದೋಣಿ

ಆಶ್ಲೇಷ ಮಳೆಯ ಅಬ್ಬರಕ್ಕೆ ಕೇರಳ ತತ್ತರಿಸಿ ಹೋಗಿದೆ. ರಾಜ್ಯದ ಬಹುತೇಕ ಕಡೆ ಮಳೆಯ ಆರ್ಭಟಕ್ಕೆ ಭಾರೀ ಹಾನಿಯಾಗಿದೆ. ಹಲವೆಡೆ ಭೂ ಕುಸಿತವುಂಟಾಗಿದ್ದು, ಸಾವಿರಾರು ಜನ ಸಂತ್ರಸ್ತರಾಗಿದ್ದಾರೆ. ಮನೆ ಮಠ ಕಳೆದುಕೊಂಡು ಗಂಜಿಕೇಂದ್ರ ಆಶ್ರಯಿಸುವಂತಾಗಿದೆ. ಕೆಲವೆಡೆ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬಿರುಕುಬಿಟ್ಟಿದ್ದು, ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ನೂರಾರು ಮರಗಳು ಬುಡಸಮೇತ ಉರುಳಿದ್ದು, ವಿದ್ಯುತ್‌ ಕಂಬಗಳು ಧರೆಗುರುಳಿವೆ. ಹೀಗಾಗಿ ವಿದ್ಯುತ್‌ ಸಂಪರ್ಕ ಕಟ್‌ ಆಗಿದ್ದು, ಅನೇಕ ಗ್ರಾಮ ಪಟ್ಟಣಗಳು ಕತ್ತಲೆಯಲ್ಲಿ ಮುಳುಗಿವೆ.

ಭಾರತೀಯ ಹವಾಮಾನ ಇಲಾಖೆ 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಕಾಸರಗೋಡಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 5ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ವಿವಿಧ ಜಿಲ್ಲೆ ಮತ್ತು ಪ್ರವಾಸಿ ತಾಣಗಳಲ್ಲಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಇಡುಕ್ಕಿಯ ಹೈರೇಂಜ್ ಪ್ರದೇಶಗಳಲ್ಲಿರುವ ಪ್ರವಾಸಿ ತಾಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ, ರಾಜ್ಯದಾದ್ಯಂತ 757 ಮಂದಿಯನ್ನು ಸಂತ್ರಸ್ತರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.

ತ್ರಿಶೂರ್ನಲ್ಲಿ ನದಿ ಪ್ರವಾಹದಲ್ಲಿ ಆನೆಯೊಂದು ಸಿಲುಕಿಕೊಂಡು ನರಳಾಡುತ್ತಿರುವ ದೃಶ್ಯ ಮಾತ್ರ ಅಯ್ಯೋ ಪಾಪ ಎನಿಸುತ್ತಿದೆ.. ಚಲಕ್ಕುಡಿ ನದಿ ಮಧ್ಯದಲ್ಲಿ ನಿಂತಿರುವ ಆನೆ ದಡ ಸೇರಲು ಪರದಾಡಿತು. ಆದರೆ ಪ್ರವಾಹದ ನೀರು ರಭಸವಾಗಿ ಹರಿದ ಕಾರಣ ಆನೆ ಭಯದಿಂದಲೇ ಅತ್ತ ಇತ್ತ ಓಡಾಡ್ತಿತ್ತು. ನದಿ ಮಧ್ಯದ ಮರದ ಬುಡದಲ್ಲಿ ಆಸರೆ ಪಡೆದಿದೆ. ಆನೆ ರಕ್ಷಣೆ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಆಲಪ್ಪುಳ, ಕೋಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶ್ಶೂರ್, ಪಾಲಕ್ಕಾಡ್, ಮಲಪ್ಪುಳ, ಕೋಯಿಕ್ಕೋಡ್, ವಯನಾಡ್, ಕಣ್ಣೂರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. 2 ವರ್ಷದ ಮಗು ಸೇರಿದಂತೆ ಮೂರು ಮಳೆಯಿಂದಾಗಿ ಪ್ರಾಣಕಳೆದುಕೊಂಡಿದ್ದಾರೆ. ಕೋಟ್ಟಯಂನಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಕೋಟ್ಟಿಕ್ಕಲ್ ಚಪ್ಪತ್ ಪ್ರದೇಶದಲ್ಲಿ ಪತ್ತೆಯಾಗಿದೆ.

ತ್ರಿಶ್ಶೂರ್‌ನ ಚಾಲಕ್ಕುಡಿ ನದಿ ನೀರಿನ ಮಟ್ಟ 5 ಮೀಟರ್ ಎತ್ತರಕ್ಕೆ ಏರಿದ್ದು, ನದಿ ಪ್ರದೇಶ, ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಪ್ರದೇಶಗಳಿಗೆ ಹೋಗುವಂತೆ ಜಿಲ್ಲಾಡಳಿತ ಸಲಹೆ ನೀಡಿದೆ. ಶೀಘ್ರದಲ್ಲೇ ಮಲಂಬುಳ ಡ್ಯಾಮ್ ಮತ್ತು ಪೊತುಂಡಿ ಅಣೆಕಟ್ಟೆ ಗೇಟ್‌ಗಳನ್ನು ತೆರೆಯಲಾಗುವುದು ಎಂದು ತಗ್ಗು ಪ್ರದೇಶದ ಜನರಿಗೆ ನೀರಾವರಿ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕೇರಳದ ಒಟ್ಟು ಏಳು ಅಣೆಕಟ್ಟೆ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

RELATED ARTICLES

Related Articles

TRENDING ARTICLES