ದೇವನಹಳ್ಳಿ : ಪಿಎಸ್‌ಐ ಅಕ್ರಮ ಒಂದು ತೂಕ ಆದ್ರೆ.. ಎಡಿಜಿಪಿ ಅಮೃತ್ ಪೌಲ್ ಆಕ್ರಮ ಆಸ್ತಿ ಮತ್ತೊಂದು ತೂಕ.. ಏನ್ ಸ್ವಾಮಿ ಇದು ಈ ಯಪ್ಪ ಇಷ್ಟೊಂದು ಆಸ್ತಿ ಮಾಡೋಕೆ ದುಡ್ಡು ಎಲ್ಲಿಂದ ಬಂತು ಅಂತ ಜನ ಸಾಮಾನ್ಯರು ಬಾಯಿ ಮೇಲೆ ಬೆರಳಿಟ್ಟುಕೊಳ್ಳದೇ ಇರಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಮೃತ್ ಪೌಲ್ ಬೇನಾಮಿ ಆಸ್ತಿ ವಿವರ ನೋಡಿದ್ರೇನೆ ಅಚ್ಚರಿಯಾಗುತ್ತೆ.
ಹೌದು, ಅಕ್ರಮ ಆಸ್ತಿ ಮಾಡಿರುವ ಅಮೃತ್ ಪೌಲ್ ವಿಚಾರವಾಗಿ ಪವರ್ ಟಿವಿ ಎಕ್ಸ್‌ಕ್ಲೂಸಿವ್ ಮಾಹಿತಿ ಕೊಡ್ತಾನೇ ಬಂದಿದೆ. ಚಿಕ್ಕಬಳ್ಳಾಪುರದ ಸುತ್ತಮುತ್ತ ಗ್ರೌಂಡ್ ರಿಪೋರ್ಟ್ ಮಾಡಿತ್ತು ನಿಮ್ಮ ಪವರ್ ಟಿವಿ.. ಇದೀಗ, ದೊಡ್ಡಬಳ್ಳಾಪುರದ ತಾಲೂಕಿನಲ್ಲಿ ಸಿಐಡಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಎಡಿಜಿಪಿ ಅಮೃತ್ ಪೌಲ್ ಪಿಎಸ್ಐ ಅಕ್ರಮ ನೇಮಕಾತಿ ಮೂಲಕ ಕೋಟ್ಯಂತರ ರೂಪಾಯಿ ಆಸ್ತಿ ಗಳಿಸಿದ್ದಾರೆ. ಈ ಮಾಹಿತಿ ಆಧಾರದ ಮೇಲೆ ಸಿಐಡಿ ಅಧಿಕಾರಿಗಳು ರಾಜ್ಯಾದ್ಯಂತ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಜಾಡು ಹಿಡಿದು ಭರ್ಜರಿ ಕಾರ್ಯಾಚರಣೆ ಮಾಡ್ತಿದ್ದಾರೆ. ಇದೀಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಸ್ಕೂರು ಗ್ರಾಮದ ಆನಂದ್ ಎಂಬುವವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಸಾಕಷ್ಟು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ. ಆನಂದ್ ಅವರ ಪತ್ನಿ ಕಲ್ಪನಾ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದು, ಆನಂದ್ ಸಹ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದಾರೆ. ಇವರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇದೇ ಆನಂದ್ ಎಡಿಜಿಪಿ ಅಮೃತ್ ಪೌಲ್ ಅಧಿಕಾರ ದುರುಪಯೋಗ ಪಡಿಸಿಕೊಂಡು ಗ್ರಾಮಸ್ಥರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುವುದರ ಜೊತೆಗೆ ಬಡವರ ಆಸ್ತಿ ಪಾಸ್ತಿಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದ್ದರು. ಈ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಪಾದನೆ ಮಾಡುತ್ತಿದ್ದರು. ಆನಂದ್ ವಿರುದ್ಧ ಯಾರಾದರೂ ಮಾತನಾಡಿದರೆ ಪೋಲಿಸ್ ಠಾಣೆಯಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲು ಮಾಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.
ಹುಸ್ಕೂರು ಗ್ರಾಮದಲ್ಲಿರುವ ಆನಂದ್ ಅವರ ಮನೆ ಮೇಲೆ ಸುಮಾರು 5ಕ್ಕೂ ಹೆಚ್ಚು ಸಿಐಡಿ ಅಧಿಕಾರಿಗಳ ತಂಡ ದಾಳಿ ನಡೆಸಿದರು. ಈ ವೇಳೆ ಅವರ ಆಸ್ತಿಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಆನಂದ್ ಅವರ ಮನೆ ಸದಸ್ಯರನ್ನು ಸಹ ವಿಚಾರಣೆ ನಡೆಸಿದ್ದಾರೆ. 2 ಗಂಟೆಗಳಿಗೂ ಅಧಿಕ ಕಾಲ ನಡೆಸಿದ ಪರಿಶೀಲನೆಯಲ್ಲಿ ಸಾಕಷ್ಟು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ನಂತರ ದೊಡ್ಡಬಳ್ಳಾಪುರ ನಗರದಲ್ಲಿರುವ ರಿಯಲ್ ಎಸ್ಟೇಟ್ ಕಚೇರಿಗಳ ಮೇಲೂ ಸಹ ಸಿಐಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದರು.
ಒಟ್ಟಾರೆ ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಎಡಿಜಿಪಿ ಅಮೃತ್ ಪೌಲ್ ಅಕ್ರಮ ಆಸ್ತಿಯ ಬಗ್ಗೆ ಸಿಐಡಿ ಅಧಿಕಾರಿಗಳು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನೂ ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಅಂತ ತನಿಖೆಯಿಂದ ಹೊರ ಬರಬೇಕಿದೆ.. ಆದ್ರೆ, ಇಂತಹ ಭ್ರಷ್ಟ ಅಧಿಕಾರಿಯ ನಿಜಬಣ್ಣ ಬಯಲು ಮಾಡುವಲ್ಲಿ ಪವರ್ ಟಿವಿ ಸಹ ಅಧಿಕಾರಿಗಳಿಗೆ ಸಹಕಾರಿಯಾಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ರಾಮಾಂಜಿ.ಎಂ ಬೂದಿಗೆರೆ ಪವರ್ ಟಿವಿ ದೇವನಹಳ್ಳಿ