ಭೂಮಿ- ಬಾನುಗೆ ದಾರದ ಸೇತುವೆ ಕಟ್ಟಿರೋ ವಿಕಟಕವಿ ಯೋಗರಾಜ್ ಭಟ್, ನೋವು- ನಲಿವಿನ ಕಥೆ ಹೇಳಲು ಮುಂದಾಗಿದ್ದಾರೆ. ಅದೇ ಗಾಳಿಪಟ-2. ಗೋಲ್ಡನ್ ಬಾಯ್ಸ್ ಈಸ್ ಬ್ಯಾಕ್ ಎನ್ನುವಂತಿರೋ ಟ್ರೈಲರ್, ಎಲ್ಲರ ದಿಲ್ ದೋಚಿದೆ. ಅಷ್ಟೇ ಅಲ್ಲ, ಭಟ್ರ ಈ ಕನಸಿಗೆ ಗೋಲ್ಡನ್ ಸ್ಟಾರ್ ಗಣಿ ಜೊತೆ ಶಿವಣ್ಣ, ಉಪ್ಪಿ, ರಮೇಶ್ ಅರವಿಂದ್ ಕೂಡ ಸಾಥ್ ನೀಡಿದ್ದಾರೆ. ಟ್ರೈಲರ್ ಹೇಗಿದೆ ಅನ್ನೋದ್ರ ಜೊತೆಗೆ ಪ್ರೀ ರಿಲೀಸ್ ಇವೆಂಟ್ನ ಹೈಲೈಟ್ಸ್ ಇಲ್ಲಿದೆ. ನೀವೇ ಓದಿ.
- ಭೂಮಿ- ಬಾನುಗೆ ದಾರದ ಸೇತುವೆ ಭಟ್ರ ಈ ‘ಗಾಳಿಪಟ’
- ನೀರುಕೋಟೆ ಮೇಷ್ಟ್ರ ಮನೆ, ಕಾಲೇಜ್ನಲ್ಲಿ ಗಣಿ ಬಾಯ್ಸ್
ಗಾಳಿಪಟ.. ಹೆಚ್ಚೂ ಕಡಿಮೆ ಒಂದೂವರೆ ದಶಕದ ಹಿಂದೆ ಬಂದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ. ಇದೀಗ ಅದ್ರ ಫ್ರಾಂಚೈಸ್ನ ಮತ್ತೊಂದು ಚಿತ್ರ ತೆರೆಗೆ ಬರ್ತಿದೆ. ಹತ್ತು ಹಲವು ವಿಶೇಷತೆಗಳಿಂದ ಗಾಳಿಪಟ-2 ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಟೈಟಲ್ಗೆ ತಕ್ಕನಾಗಿ ಮುಗಿಲೆತ್ತರದಲ್ಲಿ ಬಣ್ಣದ ಭಾವನೆಗಳು ಗಾಳಿಪಟದಂತೆ ಹಾರಾಡಲಿವೆ. ಅದ್ರ ಒನ್ ಅಂಡ್ ಓನ್ಲಿ ಮಾಸ್ಟರ್ಮೈಂಡ್ ವಿಕಟಕವಿ ಯೋಗರಾಜ್ ಭಟ್.
ಯೆಸ್.. ಸಿನಿಮಾಗೆ ಯೋಗರಾಜ್ ಭಟ್ ಮೇಷ್ಟ್ರಾದ್ರೂ ಸಹ, ಸಿನಿಮಾದಲ್ಲಿ ನಮ್ಮ ಎವರ್ಗ್ರೀನ್ ಹೀರೋ ಅನಂತ್ನಾಗ್ ಮೇಷ್ಟ್ರು. ಅವ್ರ ಘನತೆ, ಗೌರವಕ್ಕೆ ತಕ್ಕನಾದ ಸ್ನಾತ್ತಕೋತ್ತರ ಕಾಲೇಜಿನ ಕನ್ನಡ ಉಪನ್ಯಾಸಕರಿವರು. ನೀರುಕೋಟೆ ಅನ್ನೋ ಹಸಿರು ಹೊದಿಕೆಯ ಸ್ವಚ್ಚ ಪ್ರದೇಶದಲ್ಲಿನ ಈ ಮೇಷ್ಟ್ರ ಕಾಲೇಜಿನ ಜೊತೆ ಅವ್ರ ಮನಸ್ಸು ಹಾಗೂ ಮನೆಯನ್ನೂ ಆವರಿಸಿಕೊಳ್ಳೋ ತ್ರಿವಳಿ ವಿದ್ಯಾರ್ಥಿಗಳ ಜರ್ನಿ ಇದು.
ಟ್ರೈಲರ್ ಸಖತ್ ಕಲರ್ಫುಲ್ ಆಗಿ ಮೂಡಿಬಂದಿದ್ದು, ಪಾತ್ರಗಳು ಅದಕ್ಕಿಂತ ಬ್ಯೂಟಿಫುಲ್ ಆಗಿವೆ. ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ಲೀಡ್ನಲ್ಲಿ ಕಾಣಸಿಗಲಿದ್ದಾರೆ. ಒಮ್ಮೊಮ್ಮೆ ಇದು ಆಮೀರ್ ಖಾನ್ರ ತ್ರೀ ಇಡಿಯಟ್ಸ್ ಚಿತ್ರ ನೆನಪಿಸುತ್ತೆ. ಕಾಲೇಜ್ನಲ್ಲಿ ಇವ್ರ ತರಲೆ, ತುಂಟತನ, ಪ್ರೀತಿ- ಸ್ನೇಹದ ಮಜಲುಗಳೇ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್.
ಬೋರೇಗೌಡ್ರ ಮಗ ಗಣೇಶ್, ಮುಗಿಲ್ಪೇಟೆ ದಿಗಂತ್, ವಿಧೇಯ ವಿದ್ಯಾರ್ಥಿ ಭೂಷಣ್ಗೆ ರಂಗಾಯಣ ರಘು, ಬುಲೆಟ್ ಪ್ರಕಾಶ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್ ಸಾಥ್ ನೀಡಿದ್ದಾರೆ. ನಿಶ್ವಿಕಾ ನಾಯ್ಡು ಕೂಡ ತಾರಾಗಣದಲ್ಲಿದ್ದು, ಗಮನ ಸೆಳೆಯಲಿದ್ದಾರೆ. ಸಾಂಗ್ಸ್ನಿಂದ ಸದ್ದು ಮಾಡ್ತಿದ್ದ ಗಾಳಿಪಟ-2, ಇದೀಗ ಟ್ರೈಲರ್ನಿಂದ ಎಲ್ಲರ ಮನ ಗೆದ್ದಿದೆ.
- ಹುಚ್ಚು ಕುದುರೆ ಭಟ್ರನ್ನ ಕಂಟ್ರೋಲ್ ಮಾಡ್ತಾರೆ ಗಣಿ- ಉಪ್ಪಿ
- ಶಿವಣ್ಣ ಜೊತೆಗಿನ ಸ್ನೇಹ ಬಂಧ ಬಿಚ್ಚಿಟ್ಟ ರಮೇಶ್ ಅರವಿಂದ್
- ಜನ್ಯಾ ರೆಹಮಾನ್.. ಪವನ್ ಶಾರೂಖ್ ಶಾನ್- ಡಾ. ಶಿವಣ್ಣ
ಟ್ರೈಲರ್ನಷ್ಟೇ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅವಿಸ್ಮರಣೀಯವಾಗಿತ್ತು. ಖಾಸಗಿ ಹೋಟೆಲ್ನಲ್ಲಿ ನಡೆದ ಫಂಕ್ಷನ್ನಲ್ಲಿ ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಮೇಶ್ ಅರವಿಂದ್ ಗಾಳಿಪಟ 2 ಟೀಂನ ಸ್ಟ್ರೆಂಥ್ ಹೆಚ್ಚಿಸಿದ್ರು. ಒಟ್ಟಿಗೆ ಕುಣಿಯೋ ಮೂಲಕ ಎಲ್ಲರ ಗಮನ ಸೆಳೆದರು.
ಭಟ್ರ ಜೊತೆಗಿನ 17 ವರ್ಷದ ಜರ್ನಿಯನ್ನ ನೆನೆದ ಗೋಲ್ಡನ್ ಸ್ಟಾರ್ ಗಣೇಶ್, ಭಟ್ರು ತಲೆಕೆಟ್ಟ ಫ್ರೆಂಡ್ ಎಂದ್ರು. ಅಷ್ಟೇ ಅಲ್ಲ, ನನ್ನ ಭಟ್ರ ಕಾಂಬೋನ ಬೆಸ್ಟ್ ಸಿನಿಮಾ ಇದು ಎಂದ ಗಣಿ, ಅವ್ರ ಕಾರ್ನಲ್ಲಿ ಎಸಿ ಯಾವುದು..? ಸಿಗರೆಟ್ ಸ್ಮೆಲ್ ಯಾವ್ದು ಅಂತ ಗೊತ್ತಾಗಲ್ಲ ಅಂತ ಕಾಲೆಳೆದರು.
ಶಿವಣ್ಣ ಮಾತನಾಡ್ತಾ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿರೋ ಅರ್ಜುನ್ ಜನ್ಯಾರನ್ನ ಎಆರ್ ರೆಹಮಾನ್ಗೆ ಹೋಲಿಸಿದ್ರು. ಇನ್ನು ಲೂಸಿಯಾ ಪವನ್ರನ್ನ ಶಾರೂಖ್ ಖಾನ್ ಅಂತ ಅವ್ರ ಮನಸ್ಸನ್ನ ಮತ್ತಷ್ಟು ಹಿಗ್ಗಿಸಿದ್ರು.
ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್, ಸ್ಫೂರ್ತಿಯ ಚಿಲುಮೆ ರಮೇಶ್ ಅರವಿಂದ್ ಮಾತನಾಡ್ತಾ ಶಿವಣ್ಣ ಜೊತೆಗಿನ ಬಾಂಧವ್ಯ ಮೆಲುಕು ಹಾಕಿದ್ರು. ನಮ್ಮಿಬ್ಬರ ಮಧ್ಯೆ ಒಂದು ಅಹಿತಕರ ಘಟನೆ ಕೂಡ ನಡೆದಿಲ್ಲ ಎಂದ್ರು. ವೆರೈಟಿ ಪಾತ್ರಗಳನ್ನ ಮಾಡೋ ಪ್ರವೀಣ ಈ ಗಣೇಶ್ ಎಂದಿದ್ದಲ್ಲದೆ, ನಿಜವಾದ ಫನ್, ಮಜವಾದ ಲವ್ ಈ ಫಿಲ್ಮ್ನಲ್ಲಿದೆ ಎಂದರು.
ರಿಯಲ್ ಸ್ಟಾರ್ ಉಪೇಂದ್ರ ಭಟ್ರನ್ನ ಹುಚ್ಚು ಕುದುರೆ ಎಂದರು. ಅವ್ರನ್ನ ಕಂಟ್ರೋಲ್ ಮಾಡೋಕೆ ಗಣೇಶ್ ಬೇಕು, ಪ್ರೀತಿ ಪುಸ್ತಕದ ಬೆಂಡೆಕಾಯಿ ಅಂತ ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಶುಭಹಾರೈಸಿದರು.
ಸಂತೋಷ್ ರೈ ಪತಾಜೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಒಂದೊಂದು ದೃಶ್ಯ ಕೂಡ ನಯನಗಳಿಗೆ ಫ್ರೆಶ್ ಫೀಲ್ ಕೊಡುತ್ವೆ. ರಮೇಶ್ ರೆಡ್ಡಿ ನಿರ್ಮಾಣದ ಬಹುಕೋಟಿ ವೆಚ್ಚದ ಈ ಸಿನಿಮಾದ ಬಹುತೇಕ ಭಾಗ ಕಜಕಿಸ್ತಾನ್ನಲ್ಲಿ ಚಿತ್ರಿತವಾಗಿದೆ. ಅಲ್ಲಿನ ಲೊಕೇಷನ್ಸ್ನ ಬಹಳ ಚೆನ್ನಾಗಿ ಎಕ್ಸ್ಪ್ಲೋರ್ ಮಾಡಿರೋ ಟೀಂ, ಈ ಚಿತ್ರದಿಂದ ಮೇಕಿಂಗ್ನ ಮಹತ್ವ ಸಾರಲಿದೆ.
ಇನ್ನು ಗಾಳಿಪಟ 2 ಇವೆಂಟ್ಗೆ ನಿರ್ಮಾಪಕ ಕೆ ಮಂಜು, ಫಿಲ್ಮ್ ಚೇಂಬರ್ ಅಧ್ಯಕ್ಷ ಬಾಮಾ ಹರೀಶ್, ಡ್ಯಾನ್ಸ್ ಮಾಸ್ಟರ್ ಧನಂಜಯ ಸೇರಿದಂತೆ ಸಾಕಷ್ಟು ಮಂದಿ ಅತಿಥಿಗಳಾಗಿ ಆಗಮಿಸಿ ಬೆಸ್ಟ್ ವಿಶಸ್ ಹೇಳಿದ್ರು. ಸಿನಿಮಾ ಇದೇ ಜುಲೈ 12ಕ್ಕೆ ತೆರೆಗೆ ಬರ್ತಿದ್ದು, ಒಂದೊಳ್ಳೆ ಫನ್ ವಿತ್ ಎಮೋಷನಲ್ ಪಯಣದ ರಸದೌತಣ ಉಣಬಡಿಸಲಿದೆ. ಮುಂಗಾರುಮಳೆಯಿಂದ ಶುರುವಾದ ಗಣಿ- ಭಟ್ರ ಕಾಂಬೋ ಮತ್ತಷ್ಟು ದೂರ ಸಾಗಲಿ ಅಂತ ಹಾರೈಸೋಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ