ಶಿವಮೊಗ್ಗ : ತರಕಾರಿ ಮಾರುಕಟ್ಟೆ ಮುಂಭಾಗದಲ್ಲಿ ನಿಂತು ಬೇಸರ ಆತಂಕ ವ್ಯಕ್ತಪಡಿಸುತ್ತಿರುವ ಈ ವ್ಯಾಪಾರಸ್ಥರ ಪರಿಸ್ಥಿತಿ ಹೇಳತೀರದಾಗಿದೆ. ಶಿವಮೊಗ್ಗದ ವಿನೋಬನಗರ ಬಡಾವಣೆಯಲ್ಲಿ ವ್ಯಾಪಾರಸ್ಥರು ಅಲ್ಲಲ್ಲಿ ತರಕಾರಿ, ಹೂವು, ಹಣ್ಣು ಮಾರಾಟ ಮಾಡಿಕೊಂಡು ಕುಳಿತುಕೊಳ್ಳುತ್ತಿದ್ದರು. ಹೀಗಾಗಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶಿವಮೊಗ್ಗ ಮಹಾನಗರ ಪಾಲಿಕೆ ಕಳೆದ ಸುಮಾರು 10 ವರ್ಷಗಳ ಹಿಂದೆ ಈ ಕಟ್ಟಡ ನಿರ್ಮಾಣ ಮಾಡಿತ್ತು. ಈ ನೂತನ ಕಟ್ಟಡ ಉದ್ಘಾಟನೆಗೆ ಮತ್ತು ವ್ಯಾಪಾರಸ್ಥರಿಗೆ ಸ್ಥಳಾಂತರ ಮಾಡಲು ಮೀನಾಮೇಷ ಏಣಿಸುತ್ತಾ ಬಂದಿದ್ದು, ಕಳೆದ 10 ದಿನಗಳ ಹಿಂದೆಯಷ್ಟೇ, ಉದ್ಘಾಟನೆ ಮಾಡಲಾಗಿತ್ತು. ಮಾಜಿ ಸಚಿವ ಈಶ್ವರಪ್ಪ ಈ ಕಟ್ಟಡ ಉದ್ಘಾಟನೆ ಮಾಡಿ, ವ್ಯಾಪಾರಸ್ಥರಿಗೆ ಹಕ್ಕು ಪತ್ರ ಕೂಡ ವಿತರಿಸಿದ್ರು. ಆದ್ರೆ ಇದೀಗ ಇಲ್ಲಿ ವ್ಯಾಪಾರವಿಲ್ಲದೇ ಕಂಗಾಲಾಗಿದ್ದು, ಗ್ರಾಹಕರು ಇಲ್ಲಿಗೆ ಆಗಮಿಸುವಂತೆ ಅನುಕೂಲ ಮಾಡಲು ಆಗ್ರಹಿಸಿದ್ದಾರೆ.
ಗ್ರಾಹಕರಿಲ್ಲದೇ ಹಣ್ಣು, ತರಕಾರಿಗಳು ಕೊಳೆತು ಹೋಗುತ್ತಿದೆ ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಗ್ರಾಹಕರಿಲ್ಲದೆ ಮತ್ತೆ ಬೀದಿ ಬದಿ ವ್ಯಾಪಾರಕ್ಕೆ ಮುಂದಾಗುವ ಸೂಚನೆ ನೀಡುತ್ತಿದ್ದಾರೆ. ಮಹಾನಗರ ಪಾಲಿಕೆಯೂ, ಅವೈಜ್ಞಾನಿಕವಾಗಿ ಸಂಕೀರ್ಣ ನಿರ್ಮಾಣ ಮಾಡಿದ್ದೆ ಇದಕ್ಕೆ ಕಾರಣವಾಗಿದೆ ಎಂದು ಆರೋಪಿಸುತ್ತಿದ್ದಾರೆ.
ಒಟ್ಟಿನಲ್ಲಿ ಈ ತರಕಾರಿ ವ್ಯಾಪಾರದ ಸಂಕೀರ್ಣ ಗೋಡೆಯ ನಿರ್ಮಾಣದಲ್ಲಿ ಅವೈಜ್ಞಾನಿಕತೆ ಎದ್ದು ಕಾಣುತ್ತಿದೆ ಎಂದು ಅರೋಪಿಸಿರುವ ವ್ಯಾಪಾರಿಗಳು, ಇದೀಗ ಗ್ರಾಹಕರಿಲ್ಲದೆ ಪರದಾಟ ಅನುಭವಿಸುವಂತಾಗಿದೆ. ಕೂಡಲೇ ಪಾಲಿಕೆ ಅಧಿಕಾರಿಗಳು ಇತ್ತ ಗಮನಹರಿಸಿ ವ್ಯಾಪಾರಸ್ಥರ ಸಮಸ್ಯೆ ಬಗೆಹರಿಸಬೇಕಿದೆ.