ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರನ ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ಧವಾಗ್ತಿದೆ. ಹೈವೋಲ್ಟೇಜ್ ಅಖಾಡದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗಿಳಿಯೋದು ಖಚಿತವಾಗಿದೆ. ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಿರುವ ಕ್ಷೇತ್ರದಿಂದಲೇ ಯುವರಾಜನನ್ನು ಕಣಕ್ಕಿಳಿಸಲು ದೇವೇಗೌಡ್ರು ಪ್ಲಾನ್ ಮಾಡಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ್ರ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಕೊಡ್ತಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸೋದು ಖಚಿತವಾಗಿದೆ. ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿರುವ ಕಡೆ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಲು ಪ್ಲ್ಯಾನ್ ಮಾಡಲಾಗಿದೆ. ಜೆಡಿಎಸ್ ಭದ್ರಕೋಟೆಯಾಗಿರುವ ರಾಮನಗರ ಅಥವಾ ಮಾಗಡಿಯಿಂದ ಯುವರಾಜ ನಿಖಿಲ್ ಸ್ಪರ್ಧೆ ಮಾಡಲಿದ್ದಾರಂತೆ.
ರಾಮನಗರ ಶಾಸಕಿಯಾಗಿರುವ ಅನಿತಾ ಕುಮಾರಸ್ವಾಮಿ ಪುತ್ರನಿಗಾಗಿ ಕ್ಷೇತ್ರತ್ಯಾಗಕ್ಕೆ ಸಿದ್ಧವಾಗಿದ್ದಾರೆ. ಈ ಹಿಂದೆ ರಾಮನಗರದಿಂದ ಸ್ಪರ್ಧಿಸಿ ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ರು. ತಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ನೀಡಿರೋ ರಾಮನಗರದಿಂದಲೇ ನಿಖಿಲ್ ಕಣಕ್ಕಿಳಿಯಬೇಕು ಅನ್ನೋದು ದೇವೇಗೌಡ್ರ ಒತ್ತಾಸೆಯಾಗಿದೆ. ಇದರ ಜೊತೆಗೆ ಮಾಗಡಿ ಕ್ಷೇತ್ರಕ್ಕೂ ನಿಖಿಲ್ ಕುಮಾರಸ್ವಾಮಿ ಬರಬೇಕು ಅನ್ನೋ ಕೂಗು ಹೆಚ್ಚಾಗಿದೆ. ಮೇಲ್ನೋಟಕ್ಕೆ ಹಾಲಿ ಶಾಸಕ ಎ.ಮಂಜುನಾಥ್ ಕ್ಷೇತ್ರ ಬಿಟ್ಟುಕೊಡಲು ರೆಡಿಯಾಗಿದ್ರೂ, ಬೇರೆಯೇ ವಿದ್ಯಮಾನಗಳು ನಡೀತಾ ಇವೆ.
ಇನ್ನು ರಾಮನಗರ ಹೊರವಲಯದಲ್ಲೇ ರೇವತಿಯವರನ್ನು ನಿಖಿಲ್ ಮದುವೆಯಾಗಿರೋದು.. ಹೀಗಾಗಿ ರಾಮನಗರ ಜನರ ಜೊತೆ ಅವಿನಾಭಾವ ಸಂಬಂಧ ಬೆಳೆಸಿಕೊಂಡಿದ್ದಾರೆ. ಜೊತೆಗೆ ಪಕ್ಷ ಸಂಘಟನೆ, ಸಭೆಗಳಲ್ಲಿ ಬ್ಯುಸಿಯಾಗಿದ್ದಾರೆ. ಮಂಡ್ಯ ಲೋಕಸಭೆ ಚುನಾವಣೆ ಸೋಲಿನ ನಂತ್ರ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯದ ಬಗ್ಗೆ ಕುಮಾರಸ್ವಾಮಿಗೆ ಚಿಂತೆ ಎದುರಾಗಿತ್ತು. ಈಗ ಒಕ್ಕಲಿಗರ ಮತಗಳು ನಿರ್ಣಾಯಕವಾಗಿರೋ ರಾಮನಗರ ಅಥವಾ ಮಾಗಡಿಯಿಂದ ಯುವರಾಜನನ್ನು ಗೆಲ್ಲಿಸಲು ಪಣತೊಟ್ಟಿದ್ದಾರೆ.
ದೇವೇಗೌಡ್ರ ಕುಟುಂಬದ ಏಳನೇ ವ್ಯಕ್ತಿ ರಾಜಕೀಯಕ್ಕೆ ಎಂಟ್ರಿಯಾಗ್ತಿರೋ ಬಗ್ಗೆ ಹಲವು ಟೀಕೆಗಳು ವ್ಯಕ್ತವಾಗ್ತಿವೆ.. ಕುಟುಂಬ ರಾಜಕಾರಣ ಅಂದ್ರೆ ದೇವೇಗೌಡ್ರ ನಿವಾಸದತ್ತ ಬೊಟ್ಟು ಮಾಡಲಾಗುತ್ತೆ. ಸದ್ಯ ದೇವೇಗೌಡ್ರು ರಾಜ್ಯಸಭಾ ಸದಸ್ಯರಾಗಿದ್ದಾರೆ, ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕರು ಜೊತೆಗೆ ಅನಿತಾ ಕುಮಾರಸ್ವಾಮಿ ರಾಮನಗರದ ಶಾಸಕಿ. ಹಾಗೆ ಹೆಚ್.ಡಿ.ರೇವಣ್ಣ ಶಾಸಕರು, ಪ್ರಜ್ವಲ್ ರೇವಣ್ಣ ಸಂಸದರು, ಸೂರಜ್ ರೇವಣ್ಣ ಎಂಎಲ್‌ಸಿ, ಈಗ ನಿಖಿಲ್ ಕುಮಾರಸ್ವಾಮಿ ಕೂಡ ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರೆ. ಅದೇನೇ ಇದ್ರೂ ಈ ಬಾರಿಯಂತೂ ಮಾಜಿ ಸಿಎಂಗಳ ಪುತ್ರರ ಚುನಾವಣಾ ಅಖಾಡವಂತೂ ರೋಚಕವಾಗಿರುತ್ತೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಮತ್ತೆ ವರುಣಾದಿಂದ ಕಣಕ್ಕಿಳಿದ್ರೆ, ಯಡಿಯೂರಪ್ಪನವ್ರ ಪುತ್ರ ಬಿ.ವೈ ವಿಜಯೇಂದ್ರ ಶಿಕಾರಿಪುರದಲ್ಲಿ ಅಖಾಡಕ್ಕೆ ರೆಡಿಯಾಗ್ತಿದ್ದಾರೆ.
ಆನಂದ್ ನಂದಗುಡಿ ಸ್ಪೆಶಲ್ ಕರೆಸ್ಪಾಂಡೆಂಟ್ ಪವರ್ ಟಿವಿ