ದಾವಣಗೆರೆ: ಮಂಗಳೂರಿನಲ್ಲಿ ನಡೆದಂತಹ ಕೊಲೆಗಳು ರಾಜಕೀಯಕ್ಕಾಗಿ ನಡೆದಂತಹ ಕೊಲೆಗಳಾಗಿವೆ. ಇದನ್ನು ಕೂಡಲೇ ಹತೋಟಿಗೆ ತೆಗೆದುಕೊಳ್ಳಬೇಕು ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಒತ್ತಾಯಿಸಿದರು.
ಇಂದು ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜಕೀಯಕ್ಕೋಸ್ಕರ ಕೊಲೆ ಮಾಡುತ್ತಿರುವುದು ತಪ್ಪು. ಅದು ದುರ್ದೈವ. ಮಂಗಳೂರಿನಲ್ಲಿ ನಡೆದ ಘಟನೆ ಸರ್ಕಾರ ಸಹಿಸುವುದಿಲ್ಲ. ಪರಿಸ್ಥಿತಿ ತಿಳಿ ಮಾಡಲಿಲ್ಲ ಅಂದರೆ ತಪಾತ್ರೆಯ ಕಟ್ಟಿಟ್ಟ ಬುತ್ತಿ. ಹತ್ಯೆ ಮಾಡುವ ಹಂತಕ್ಕೆ ಯಾರು ಹೋಗಬಾರದು. ಆದರೆ ಪ್ರವೀಣ್ ಹತ್ಯೆ ಮಾಡಿದವರು ಅವರ ಅಂಗಡಿಯಲ್ಲೇ ಕೆಲಸ ಮಾಡುವವರೆಂದು ಹೇಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ನಡೆದ ಹತ್ಯೆ ಬಗ್ಗೆ PFI ಕೈವಾಡ ಇದೆ ಎನ್ನುವುದರ ಬಗ್ಗೆ ಆಧಾರ ಇಲ್ಲದೆ ಮಾತನಾಡಲು ಬರುವುದಿಲ್ಲ. PFI ಅವರ ಬಗ್ಗೆ ಬಿಜೆಪಿ, ಕಾಂಗ್ರೆಸ್‍ನವರ ಬಳಿ ದಾಕ್ಷಿಣ್ಯ ಇಲ್ಲ. PFIಯನ್ನು ತನಿಖೆ ಮಾಡಲು ಆಧಾರ ಸಾಕ್ಷಿಗಳು ಬೇಕಾಗುತ್ತದೆ ಎಂದು ಹೇಳಿದರು.
ಇನ್ನು ಏಕಾಏಕಿ ಮತ್ತೊಬ್ಬರ ಕಡೆ ಬೊಟ್ಟು ಮಾಡಿ ತೋರಿಸಲು ಬರುವುದಿಲ್ಲ. ಇದನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.